ತಿರುವನಂತಪುರಂ: ರಾಜ್ಯದಲ್ಲಿ ಪಂಚಾಯತು ಚುನಾವಣೆಯು ಡಿಸೆಂಬರ್ 9, 11 ಎಂಬೀ ದಿನಗಳಲ್ಲಿ ಎರಡು ಹಂತಗಳಲ್ಲಿ ನಡೆಯಲಿದೆ. ಕಾಸರಗೋಡು ಜಿಲ್ಲೆಯಲ್ಲಿ ಡಿಸೆಂಬರ್ 11 ರಂದು ನಡೆಯಲಿದೆ. ಡಿಸೆಂಬರ್ 13 ರಂದು ಮತ ಎಣಿಕೆ ನಡೆಯಲಿದ್ದು ಸಾಯಂಕಾಲದೊಳಗೆ ಫಲಿತಾಂಶ ಪ್ರಕಟವಾಗಲಿದೆ.
ಚುನಾವಣೆಯ ಅಂಗವಾಗಿ ನಾಮಪತ್ರಿಕೆ ಸಲ್ಲಿಕೆ ನವಂಬರ್ 14 ರಿಂದ 21 ರ ವರೆಗೆ ನಡೆಯಲಿದೆ. 22ರಂದು ಸೂಕ್ಷ್ಮ ಪರಿಶೋಧನೆ, 24 ರಂದು ನಾಮಪತ್ರಿಕೆ ಹಿಂಪಡೆಯುವುದಾಗಿದೆ. ಇಂದು (ಸೋಮವಾರ) ತಿರುವನಂತಪುರಂ ಚುನಾವಣಾ ಆಯೋಗದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಲಾಯಿತು.
ರಾಜ್ಯದಲ್ಲಿ ನಗರಸಭೆ, ಜಿಲ್ಲೆ, ಬ್ಲೋಕ್ ಹಾಗೂ ಪಂಚಾಯತುಗಳು ಸೇರಿದ ಸ್ಥಳೀಯಾಡಳಿತೆಯ ದಿನಾಂಕವನ್ನು ಪ್ರಕಟಿಸಲಾಗಿದೆ. ರಾಜ್ಯದಲ್ಲಿ ಒಟ್ಟು 23576 ವಾರ್ಡುಗಳಲ್ಲಿ 2.84 ಕೋಟಿ ಮತದಾರರು ಇದ್ದಾರೆ. 2841 ಅನಿವಾಸಿ ಮತದಾರರಿದ್ದಾರೆ. ರಾಜ್ಯದಲ್ಲಿ ಒಟ್ಟು 33746 ಮತದಾನ ಕೇಂದ್ರಗಳಿವೆ. ಅಕ್ಟೋಬರ್ 25 ರಂದು ಪ್ರಕಟಿಸಿದ ಅಂತಿಮ ಮತದಾರರ ಪಟ್ಟಿಯಂತೆ ಈ ಲೆಕ್ಕ ಪ್ರಕಟಿಸಲಾಗಿದೆ. ನವಂಬರ್ 4,5 ರಂದು ತಿದ್ದುಪಡಿಗೆ ಅವಕಾಶ ನೀಡಲಾಗಿತ್ತು. ಇದರನ್ವಯ ನವಂಬರ್ 14 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.ಮತದಾರರ ಪಟ್ಟಿಯನ್ನು ಅಂಗೀಕೃತ ರಾಜಕೀಯ ಪಕ್ಷಗಳಿಗೆ ಉಚಿತವಾಗಿ ನೀಡಲಾಗುವುದೆಂದು ಚುನಾವಣಾ ಆಯೋಗ ತಿಳಿಸಿದೆ. ಅಭ್ಯರ್ಥಿಗಳನ್ನು 5 ವಿಭಾಗಗಳಾಗಿ ಮೀಸಲಾತಿಗೆ ಪರಿಗಣಿಸಲಾಗಿದೆ. ಅಭ್ಯರ್ಥಿಗಳು 21 ವರ್ಷ ಪೂರ್ತಿಯಾಗಬೇಕಿದೆ. ಪರಿಶಿಷ್ಟ ಜಾತಿ, ವರ್ಗದವರಿಗೆ ಸೂಕ್ತ ಪ್ರಮಾಣಪತ್ರ ಅಗತ್ಯವಾಗಿದೆ.
70 ಸಾವಿರ ಪೊಲೀಸರು, 1249 ರಿಟರ್ನಿಂಗ್ ಆಫೀಸರು, 1.80 ಲಕ್ಷ ಸಿಬಂದಿಗಳನ್ನು ಕರ್ತವ್ಯಕ್ಕೆ ನೇಮಿಸಲಾಗಿದೆ. ಚುನಾವಣೆ ಘೋಷಣೆಯಾದ ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ.
ಅಭ್ಯರ್ಥಿಗಳು ನಾಮಪತ್ರಿಕೆ ಸಲ್ಲಿಸುವ ವೇಳೆ ನಿಶ್ಚಿತ ಶುಲ್ಕ ಪಾವತಿಸಬೇಕು. ಗ್ರಾಮ ಪಂಚಾಯತು 2 ಸಾವಿರ, ಬ್ಲೋಕ್ 4 ಸಾವಿರ, ಜಿಲ್ಲೆಗೆ 5 ಸಾವಿರ ಶುಲ್ಕವಾಗಿದೆ. ಗ್ರಾಮ ಪಂಚಾಯತಿ ಅಭ್ಯರ್ಥಿ 25 ಸಾವಿರ, ಬ್ಲೋಕ್, ನಗರ ಸಭಾ ಅಭ್ಯರ್ಥಿ 75 ಸಾವಿರ ರೂ, ಜಿಲ್ಲಾ ಪಂ.ಅಭ್ಯರ್ಥಿ 1.5 ಲಕ್ಷ ರೂ ಮಾತ್ರ ಖರ್ಚು ಮಾಡಬಹುದಾಗಿದೆ.

0 Comments