Ticker

6/recent/ticker-posts

Ad Code

ಟಿವಿ ಎಂಬ ಮಾಯಾ ಪೆಟ್ಟಿಗೆಯ ಪರದೆ ಸರಿಸಿದ ದಿನ....

 


ಆಗಿನ್ನೂ ಟಿವಿ ಹಳ್ಳಿಗಳಿಗೆ ಕಾಲಿಟ್ಟ ಕಾಲಘಟ್ಟ. ಸ್ವಲ್ಪ ಉನ್ನತ ಮಟ್ಟದ  ಶ್ರೀಮಂತರ ಮನೆಗಳಲ್ಲಿ ಮಾತ್ರ ಟಿವಿ ಎಂಬ ಈ ಮಾಯಾ ಪೆಟ್ಟಿಗೆ ಕಾಣಸಿಗುತ್ತಿತ್ತು. ಅದರಲ್ಲೂ ಈಗಿನಂತೆ ತರಹೇವಾರಿ ಕಾರ್ಯಕ್ರಮಗಳು ಇರುತ್ತಿರಲಿಲ್ಲ. ಸೀಮಿತ ಅವಧಿಯಲ್ಲಿ ವಾರಕ್ಕೊಮ್ಮೆ ಪ್ರಸಾರವಾಗುತ್ತಿದ್ದ ಧಾರಾವಾಹಿಗಳನ್ನು ನೋಡುವುದಕ್ಕಾಗಿ ಚಾತಕ ಪಕ್ಷಿಯಂತೆ ಕಾದು ಟಿವಿ ಇದ್ದವರ ಮನೆಗೆ ದೌಡಾಯಿಸುತ್ತಿದ್ದ ಕಾಲವದು. ಅಕ್ಕ ಪಕ್ಕದ ಮನೆಯವರೆಲ್ಲಾ ಒಟ್ಟು ಸೇರಿ ಟಿವಿ ನೋಡುವುದರಲ್ಲಿಯೂ ಮಜವಿರುತ್ತಿತ್ತು. ಆ ಸಂದರ್ಭದಲ್ಲಿ  ಆ ಮನೆಯವರಿಗೆ ನಾವೇಕೆ ಟಿವಿ ತಂದೆವೋ ಅನ್ನಿಸಿರಲೂ ಬಹುದು. ಅದನ್ನೆಲ್ಲಾ ಗಮನಿಸುವ ಗೋಜಿಗೆ ಯಾರೂ ಹೋಗುತ್ತಿರಲಿಲ್ಲ. ಕೆಲವೊಮ್ಮೆ ಮನೆಯವರು ಟಿವಿ ಆಫ್ ಮಾಡಿ ಕರೆಂಟಿಲ್ಲವೆಂದೋ ಆಂಟೆನಾ ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದೋ ಸುಳ್ಳು ಹೇಳಿದರೂ ನಂಬಲೇ ಬೇಕು. ತಮ್ಮ ಮನೆಯಲ್ಲಿ ಜನ ಜಾತ್ರೆ ಸೇರಿದರೆ ಅವರಾದರೂ ಏನು ಮಾಡಬೇಕು ಪಾಪ!

             ಹೀಗೆ ಒಂದು ಅದ್ಭುತವಾಗಿ ಜನಜೀವನಕ್ಕೆ ಕಾಲಿರಿಸಿದ ಟೆಲಿವಿಷನ್ ಅಥವಾ ದೂರದರ್ಶನವನ್ನು ಕಂಡುಹಿಡಿದುದೇ  ಒಂದು ವಿಸ್ಮಯ!  ಟೆಲಿವಿಷನ್ ನ ಇತಿಹಾಸವನ್ನು ಕೆದಕಿದರೆ 1924ರಲ್ಲಿ ಜಾನ್ ಲೋಗಿ ಬೇರ್ಡ್ ಎಂಬವರು ಈ ದೂರದರ್ಶನವನ್ನು ಕಂಡುಹಿಡಿದರು. ಬಳಿಕ 1927ರಲ್ಲಿ ಫಿಲೋ ಫಾರ್ನ್‌ವರ್ತ್ ಮೊದಲ ಸಂಪೂರ್ಣ ಎಲೆಕ್ಟ್ರಾನಿಕ್ ದೂರದರ್ಶನವನ್ನು ಯಶಸ್ವಿಯಾಗಿ ಪ್ರದರ್ಶಿಸಿದರು. 1928ರಲ್ಲಿ ಬೇರ್ಡ್ ಅವರು ಲಂಡನ್ ಮತ್ತು ನ್ಯೂಯಾರ್ಕ್ ನಡುವೆ ಮೊದಲ ಟ್ರಾನ್ಸ್-ಅಟ್ಲಾಂಟಿಕ್ ಸಂಕೇತವನ್ನು ಕಳುಹಿಸಿದರು. ಹಾಗೆಯೇ 1941ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮೊದಲ ದೂರದರ್ಶನ ಜಾಹೀರಾತು ಪ್ರಸಾರವಾಯಿತು. ಇನ್ನು ಭಾರತದಲ್ಲಿ
1959ರಲ್ಲಿ ವಿಶ್ವಸಂಸ್ಥೆಯ ನೆರವಿನೊಂದಿಗೆ ನವದೆಹಲಿಯಲ್ಲಿ ಮೊದಲ ಪ್ರಾಯೋಗಿಕ ದೂರದರ್ಶನ ಪ್ರಸಾರ ಆರಂಭವಾಯಿತು. 1965ರಲ್ಲಿ ಆಲ್ ಇಂಡಿಯಾ ರೇಡಿಯೊದ ಅಡಿಯಲ್ಲಿ ನಿಯಮಿತ ದೈನಂದಿನ ಪ್ರಸಾರ ಪ್ರಾರಂಭವಾಯಿತು. 1976ರಲ್ಲಿ ದೂರದರ್ಶನವನ್ನು ಆಲ್ ಇಂಡಿಯಾ ರೇಡಿಯೊದಿಂದ ಅಧಿಕೃತವಾಗಿ ಪ್ರತ್ಯೇಕಿಸಲಾಯಿತು. 1982ರಲ್ಲಿ ದೂರದರ್ಶನ ರಾಷ್ಟ್ರೀಯ ಪ್ರಸಾರಕವಾಯಿತು. 1992ರಲ್ಲಿ ಖಾಸಗಿ ಚಾನೆಲ್‌ಗಳ ಪ್ರವೇಶದಿಂದಾಗಿ ದೂರದರ್ಶನವು ಸ್ಪರ್ಧೆಯನ್ನು ಎದುರಿಸಲು ಪ್ರಾರಂಭಿಸಿತು. 

ಮುಂದೆ ಟಿವಿ ಎಂಬ ಈ ಪುಟ್ಟ ಪೆಟ್ಟಿಗೆ ಮನೆ ಮನೆಗೂ ಬಂದು ತನ್ನ ಪರಾಕ್ರಮ ಮೆರೆದುದು ಈಗ ಇತಿಹಾಸ! ಈಗ ಹೊಸ ಹೊಸ ನಮೂನೆಯ ಟೆಲಿವಿಷನ್ ಗಳು ಕೋಣೆಗೊಂದರಂತೆ ಮನೆಗಳನ್ನಲಂಕರಿಸಿದ್ದರೂ ನೋಡಲು ಸಮಯದ ಅಭಾವ! ಕೈಯಲ್ಲಿನ ಸ್ಮಾರ್ಟ್ ಫೋನ್ ಗಳು ಪರಸ್ಪರ ಮನೆಯವರನ್ನೇ ಅಪರಿಚಿತರನ್ನಾಗಿ ಮಾಡಿವೆ.
      ಟೆಲಿವಿಷನ್ ಉತ್ತಮ ಮನೋರಂಜನೆಯ ಮೂಲವಾಗಿದೆ ಮತ್ತು ಯಾಂತ್ರಿಕ ಬದುಕಿನಲ್ಲಿ ಒತ್ತಡವನ್ನು  ಕಡಿಮೆ ಮಾಡಿ ಕೊಂಚ ನೆಮ್ಮದಿಯನ್ನು ನೀಡುತ್ತದೆ. ಮಾಹಿತಿ ಮತ್ತು ಶಿಕ್ಷಣದಂತಹ ಪ್ರಯೋಜನಗಳನ್ನು ನೀಡುತ್ತದೆ. ಜಾಗತಿಕ ಘಟನೆಗಳ ಬಗ್ಗೆ ಅರಿವು ಮೂಡಿಸುವುದಲ್ಲದೆ  ಉತ್ತಮ ಗುಣಮಟ್ಟದ ಶೈಕ್ಷಣಿಕ ವಿಷಯವನ್ನು ಒದಗಿಸುತ್ತದೆ.  ಆದರೆ ಇದರ ಅತಿಯಾದ ಬಳಕೆಯು ಆಲಸ್ಯ, ಕಣ್ಣಿನ ತೊಂದರೆಗಳೇ ಮೊದಲಾದ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. 
        
             ಪ್ರತಿ ವರ್ಷ ನವೆಂಬರ್ 21 ರಂದು 'ವಿಶ್ವ ದೂರದರ್ಶನ  ದಿನ'ವನ್ನು ದೂರದರ್ಶನದ ಪ್ರಭಾವದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಚರಿಸಲಾಗುತ್ತದೆ. 1996ರಲ್ಲಿ ವಿಶ್ವಸಂಸ್ಥೆಯು ಮೊದಲ ವಿಶ್ವ ದೂರದರ್ಶನ ವೇದಿಕೆಯನ್ನು ಆಯೋಜಿಸಿದ ನೆನಪಿಗಾಗಿ ಈ ದಿನಾಚರಣೆ ಆರಂಭಿಸಲಾಯಿತು.  ಜಾಗತಿಕ ಸಂವಹನ, ಮನೋರಂಜನೆ, ಶಿಕ್ಷಣ ಮತ್ತು ಸುದ್ದಿಯಲ್ಲಿ ದೂರದರ್ಶನದ ಮಹತ್ವವನ್ನು  ಗುರುತಿಸುವುದು  ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. 1996ರ ನವೆಂಬರ್ 21-22 ರಂದು ವಿಶ್ವಸಂಸ್ಥೆಯು ಮೊದಲ ವಿಶ್ವ ದೂರದರ್ಶನ ವೇದಿಕೆಯನ್ನು ಆಯೋಜಿಸಿತ್ತು. ಆ ನೆನಪಿಗಾಗಿ, 1996ರ ಡಿಸೆಂಬರ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನವೆಂಬರ್ 21ನ್ನು ವಿಶ್ವ ದೂರದರ್ಶನ ದಿನವಾಗಿ ಘೋಷಿಸಲಾಯಿತು. 

2025ರ ವಿಶ್ವ ದೂರದರ್ಶನ ದಿನವನ್ನು ನವೆಂಬರ್ 21ರಂದು ಆಚರಿಸಲಾಗುತ್ತದೆ. ಈ ದಿನವು ಜಾಗತೀಕರಣ ಮತ್ತು ಮಾಹಿತಿಯ ಸಂವಹನದಲ್ಲಿ ಟಿವಿಯ ಪ್ರಭಾವವನ್ನು ಗುರುತಿಸುತ್ತದೆ ಮತ್ತು ಜನರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ದೂರದರ್ಶನದ ಪಾತ್ರವನ್ನು ಎತ್ತಿ ಹಿಡಿಯುತ್ತದೆ.

ಬರಹ : ವನಜಾಕ್ಷಿ ಪಿ ಚೆಂಬ್ರಕಾನ

ಸಂಪಾದಕೀಯ ಬಳಗ - ವಿಶೇಷ ಚಾನೆಲ್

Post a Comment

0 Comments