Ticker

6/recent/ticker-posts

Ad Code

ಕೃಷಿ ವಲಯ ಸಂರಕ್ಷಣೆಗೆ ಬೆಳ್ಳೂರಿನಲ್ಲಿ 9ಕಿ.ಮೀ. ಸೌರ ಬೇಲಿ ; ಫೆ. 22ರಂದು ಸಚಿವ ಎ.ಕೆ.ಶಶೀಂದ್ರನ್ ಉದ್ಘಾಟನೆ

 

ಬೆಳ್ಳೂರು : ಬೆಳ್ಳೂರು ಗ್ರಾಪಂ ವ್ಯಾಪ್ತಿಯ ಕೃಷಿಕರ  ದೀರ್ಘಕಾಲದ ಬೇಡಿಕೆಯನ್ನು ಪರಿಗಣಿಸಿ ಕಾಸರಗೋಡು ಅರಣ್ಯ ವಿಭಾಗದ ಪರಪ್ಪ ರೇಂಜ್ ನೆಟ್ಟಣಿಗೆ ಬೀಟ್ ವ್ಯಾಪ್ತಿಯಲ್ಲಿ ಜಾರಿಗೆ ತರಲಾದ 9ಕಿ.ಮೀ. ಸೌರ ಬೇಲಿ ಯೋಜನೆಯನ್ನು ಅರಣ್ಯ ಸಚಿವ ಎ.ಕೆ.ಶಶೀಂದ್ರನ್ ಫೆ.22ರಂದು ಉದ್ಘಾಟಿಸಲಿದ್ದಾರೆ. ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತಿರುವ ಪ್ರದೇಶದಲ್ಲಿ ಕೃಷಿ ವಲಯವನ್ನು ಸಂರಕ್ಷಿಸಲು ಇಲಾಖೆಗಳ ಸಮನ್ವಯದೊಂದಿಗೆ ಜಾರಿಗೆ ತರಲಾದ ಮಾದರಿ ಯೋಜನೆ ಇದಾಗಿದೆ. ಪರಪ್ಪ ರೇಂಜ್ ಅರ್ತಿಕುಡ್ಲುವಿನಿಂದ ದೇಶಮೂಲೆವರೆಗೆ ಭತ್ತ ಬೆಳೆಯಲಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಈ ಪ್ರದೇಶದಲ್ಲಿ ಕಾಡುಕೋಣ ಸೇರಿದಂತೆ ಕಾಡು ಪ್ರಾಣಿಗಳ ಅತಿಕ್ರಮಣದಿಂದಾಗಿ ವ್ಯಾಪಕ ಬೆಳೆ ಹಾನಿ ಸಂಭವಿಸಿದೆ. 

ಕಾಡು ಪ್ರಾಣಿಗಳನ್ನು ಹೊಲಗಳಿಂದ ದೂರವಿಡಲು ಅರಣ್ಯ ಇಲಾಖೆಯು ವೈಜ್ಞಾನಿಕ ತಡೆಗಟ್ಟುವಿಕೆಯಾಗಿ ಸೌರ ಬೇಲಿಗಳನ್ನು ಅಳವಡಿಸಲು ಮುಂದಾಗಿದೆ. ಕೃಷಿ ಇಲಾಖೆ ಮತ್ತು ಪಂಚಾಯತಿ ಜಂಟಿ ಸಹಕಾರದೊಂದಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಕೃಷಿ ಇಲಾಖೆಯ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್.ಕೆ.ವಿ.ವೈ.) ಯೋಜನೆಯಿಂದ 37 ಲಕ್ಷ ರೂ. ಮತ್ತು ಬೆಳ್ಳೂರು ಗ್ರಾಪಂ ನಿಂದ 1.88 ಲಕ್ಷ ರೂ.ಗಳ ಆರ್ಥಿಕ ನೆರವು ಲಭಿಸಿದೆ. ಸ್ಥಳೀಯಾಡಳಿತದ ಸಹಕಾರದೊಂದಿಗೆ ಹಂತ ಹಂತವಾಗಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 

ಅರಣ್ಯ ಮಿತಿಯಿಂದ ಕಾಡುಪ್ರಾಣಿಗಳು ಹೊರ ಬರುವುದನ್ನು ತಡೆಯುವ ಮೂಲಕ, ಭತ್ತದ ಕೃಷಿ ಮತ್ತು ಸಂಬಂಧಿತ ಕೃಷಿ ಚಟುವಟಿಕೆಗಳನ್ನು ಮುಂದುವರಿಸಲು ರೈತರಿಗೆ ಸಾಧ್ಯವಾಗಲಿದೆ. ಮಾನವ-ವನ್ಯಜೀವಿ ಸಂಘರ್ಷವೂ ಕಡಿಮೆಯಾಗಿ ರೈತರ ಆರ್ಥಿಕ ಸ್ಥಿತಿ ಸುಧಾರಿಸಲಿದೆ ಎಂದು ಅಧಿಕಾರಿಗಳು ಆಶಿಸಿದ್ದಾರೆ. ಪ್ರಕೃತಿ ಸಂರಕ್ಷಣೆಯನ್ನು ಹೆಚ್ಚು ಜನಪ್ರಿಯಗೊಳಿಸಲು ಈ ಯೋಜನೆ ಮಾದರಿಯಾಗಲಿದೆ ಎಂದು ಅರಣ್ಯ ಇಲಾಖೆ ಹೇಳಿದೆ.

Post a Comment

0 Comments