ಬೆಳ್ತಂಗಡಿ : ಸ್ಕೂಟರ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಗಂಭೀರ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ ಏಳು ವರ್ಷದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾನೆ.

ಮೃತ ಬಾಲಕನನ್ನು ಬೆಳಾಲು ಗ್ರಾಮದ ನಿವಾಸಿ, ನಿವೃತ್ತ ಸೇನಾ ಯೋಧ ಮೋಹನ್ ಗೌಡ ಕಡಂದ ಅವರ ಪುತ್ರ ದಿಯಾನ್ (7) ಎಂದು ಗುರುತಿಸಲಾಗಿದೆ. ದಿಯಾನ್ ಉಜಿರೆಯ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿದ್ದ. ಜೂನ್ 12ರಂದು ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಮಿನಾಂದೆಲು ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಮೋಹನ್ ಗೌಡ ಅವರು ತಮ್ಮ ಪುತ್ರನೊಂದಿಗೆ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವಾಹನದಲ್ಲಿ ತಾಂತ್ರಿಕ ದೋಷ ಉಂಟಾಗಿ ರಸ್ತೆಯ ಮಧ್ಯೆಯೇ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು.

ಬೆಂಕಿಯ ಅವಘಡದಲ್ಲಿ ದಿಯಾನ್ ಗಂಭೀರವಾಗಿ ಸುಟ್ಟ ಗಾಯಗೊಂಡಿದ್ದು, ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬಾಲಕ ಕೊನೆಯುಸಿರೆಳೆದಿದ್ದಾನೆ. ಘಟನೆಯಲ್ಲಿ ಗಾಯಗೊಂಡಿದ್ದ ಮೋಹನ್ ಗೌಡ ಅವರು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.