MURDER : ಚಲಿಸುತ್ತಿದ್ದ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಆರಂಭವಾದ ಜಗಳ ಭೀಕರ ಹತ್ಯೆಯಲ್ಲಿ ಅಂತ್ಯಗೊಂಡ ಘಟನೆ ಮುಂಬೈಯಲ್ಲಿ ನಡೆದಿದೆ. ರೈಲಿನ ಬಾಗಿಲು ಮುಚ್ಚುವ ವಿಚಾರಕ್ಕೆ ಉಂಟಾದ ವಾಗ್ವಾದದ ವೇಳೆ 21 ವರ್ಷದ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಮೃತ ಯುವಕನನ್ನು ಮಯಾಂಕ್ ಲೋಹರ್ ಎಂದು ಗುರುತಿಸಲಾಗಿದೆ. ಮಂಗಳವಾರ ರಾತ್ರಿ ಚರ್ಚ್‌ಗೇಟ್–ನಲಾಸೋಪಾರಾ ಫಾಸ್ಟ್ ಲೋಕಲ್ ರೈಲಿನ ಪ್ರಥಮ ದರ್ಜೆ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಘಟನೆ ನಡೆದಿದೆ. ಗೋರೆಗಾಂವ್ ಮತ್ತು ಕಂಡಿವಲಿ ನಿಲ್ದಾಣಗಳ ನಡುವಿನ ಮಾರ್ಗದಲ್ಲಿ ಭಾರೀ ಮಳೆಯ ಹಿನ್ನೆಲೆ ಬಾಗಿಲು ಮುಚ್ಚುವ ವಿಚಾರಕ್ಕೆ ಪ್ರಯಾಣಿಕರ ನಡುವೆ ಮಾತಿನ ಚಕಮಕಿ ಶುರುವಾಗಿದೆ. ವಾದವಿವಾದ ತೀವ್ರಗೊಂಡಾಗ ಕೆಲ ಪ್ರಯಾಣಿಕರು ಆರೋಪಿ ರೋಷನ್ ಸುವರ್ಣನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಆರೋಪಿ ತನ್ನ ಬ್ಯಾಗ್‌ನಲ್ಲಿದ್ದ ಚಾಕು ತೆಗೆದು ಮಯಾಂಕ್ ಮೇಲೆ ದಾಳಿ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಯಾಂಕ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಾಕು ಹಿಡಿದು ಬೋಗಿಯೊಳಗೆ ಓಡಾಡುತ್ತಿರುವ ಆರೋಪಿ ಹಾಗೂ ಭಯಭೀತರಾಗಿ ದೂರ ಸರಿಯುತ್ತಿರುವ ಪ್ರಯಾಣಿಕರ ದೃಶ್ಯಗಳು ಅದರಲ್ಲಿ ಕಾಣಿಸಿಕೊಂಡಿವೆ. ಮೃತ ಮಾಯಾಂಕ್‌ಗೆ ಇಬ್ಬರು ಸಹೋದರರು ಮತ್ತು ಒಬ್ಬ ಸಹೋದರಿ ಇದ್ದಾರೆ. ಹಿರಿಯ ಸಹೋದರ ಅಹಮದಾಬಾದ್‌ನಲ್ಲಿ ಕೆಲಸ ಮಾಡುತ್ತಾನೆ ಮತ್ತು ಕಿರಿಯ ಸಹೋದರ ಮೋಹಿತ್ ವಿದ್ಯಾರ್ಥಿಯಾಗಿದ್ದಾನೆ.
ಮುಂಬೈ ಸೆಂಟ್ರಲ್‌ನ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮತ್ತು ಹಿರಿಯ ವಿಭಾಗೀಯ ಭದ್ರತಾ ಆಯುಕ್ತರು ಸೇರಿದಂತೆ ಹಿರಿಯ ರೈಲ್ವೆ ಅಧಿಕಾರಿಗಳು ಬೊರಿವಲಿ ನಿಲ್ದಾಣಕ್ಕೆ ಆಗಮಿಸಿ ರೈಲು ಮತ್ತು ನಿಲ್ದಾಣದಿಂದ ಸಿಸಿಟಿವಿ ರೆಕಾರ್ಡಿಂಗ್‌ಗಳನ್ನು ಸಂಗ್ರಹಿಸಿದ್ದಾರೆ. ಘಟನೆಯ ಬಳಿಕ ಆರೋಪಿ ರೈಲಿನಿಂದ ಪರಾರಿಯಾಗಿದ್ದರೂ, ಮಾಹಿತಿ ಪಡೆದ ರೈಲ್ವೆ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಕುರ್ಲಾ ಪ್ರದೇಶದಲ್ಲಿ ರೋಷನ್ ಸುವರ್ಣನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

0 Comments