ಕಾಸರಗೋಡು : ಮೀನುಗಾರಿಕಾ ನಿಷೇಧದ ಅವಧಿಯಲ್ಲಿ ಕೇರಳದ ಮಾರುಕಟ್ಟೆಗೆ ನೆರೆ ರಾಜ್ಯಗಳಿಂದ ರಾಸಾಯನಿಕ ಬೆರೆಸಿದ ಹಳಸಿದ ಮೀನುಗಳು ಪೂರೈಕೆಯಾಗುತ್ತಿರುವುದು ಪತ್ತೆಯಾಗಿದೆ. ಮೀನುಗಳು ಕೆಡದಂತೆ ತಡೆಯಲು ಶವಾಗಾರಗಳಲ್ಲಿ ಬಳಸುವ ಫೋರ್ಮಾಲಿನ್ ಹಾಗೂ ಐಸ್ ಕರಗದಂತೆ ಮಾಡಲು ಅಮೋನಿಯಂನಂತಹ ಅಪಾಯಕಾರಿ ರಾಸಾಯನಿಕಗಳನ್ನು ಬಳಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.
ನೋಡಲು ತಾಜಾ ಮೀನುಗಳಂತೆ ಕಾಣುವ ಹಳಸಿದ ಮೀನುಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಫೋರ್ಮಾಲಿನ್‌ಗಳನ್ನು ಶವಾಗಾರಗಳಲ್ಲಿ ಮೃತದೇಹಗಳು ಕೊಳೆಯದಂತೆ ಇಡಲು ಬಳಸುತ್ತಾರೆ. ಇದನ್ನು ಬಳಕೆ ಮಾಡಿದರೆ ಮೀನುಗಳು ಹೆಚ್ಚು ದಿನಗಳ ಕಾಲ ಹಾಳಾಗದಂತೆ ಇರುತ್ತವೆ. ಆದರೆ ಫೋರ್ಮಾಲಿನ್ ಬೆರೆತ ಮೀನು ಸೇವಿಸುವುದು ಮನುಷ್ಯರಲ್ಲಿ ಕಿಡ್ನಿ ರೋಗದ ಸಮಸ್ಯೆ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದು ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಮೀನಲ್ಲಿ ಇಡುವ ಐಸ್ ಬೇಗನೇ ನೀರಾಗದಿರಲು ಅಮೋನಿಯಂ ಉಪಯೋಗಿಸಲಾಗುತ್ತದೆ. ಇದು ಮೀನಿಗೆ ತಾಜಾತನ ಹಾಗೂ ಹೊಸದರಂತೆ ಕಾಣಲು ನೆರವಾಗುತ್ತದೆ. ಅಮೋನಿಯಂ ಬೆರೆತ ಮೀನು ಸೇವಿಸುವುದು ಮಾನವನ ಕರುಳಿಗೆ ಹಾನಿಯುಂಟಾಗಲು ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಕಣ್ಣುಗಳು ಕೆಂಪಾಗಿ ಬಣ್ಣ ಮಾಸಿದ ಮೀನುಗಳು ಹಳಸಿದ ಮೀನುಗಳು ಎಂದು ಆರೋಗ್ಯ ವಿಭಾಗ ಅಧಿಕಾರಿಗಳು ಹೇಳುತ್ತಾರೆ. ಸೂಕ್ಷ್ಮವಾಗಿ ಗಮನಿಸಿದರೆ ಇವು ಹಳಸಿದ ಮೀನುಗಳೆಂದು ಸುಲಭವಾಗಿ ಗುರುತಿಸಬಹುದಾಗಿದೆ.
ಮೀನುಗಾರಿಕೆ ನಿಷೇಧ ಸಂದರ್ಭ ಆಹಾರ ಭದ್ರತಾ ವಿಭಾಗವು ಕೇರಳ ರಾಜ್ಯಾದ್ಯಂತ ವ್ಯಾಪಕ ತಪಾಸಣೆ ನಡೆಸಿತ್ತು. ಈ ಸಂದರ್ಭ ರಾಸಾಯನಿಕ ವಸ್ತುಗಳನ್ನು ಬೆರೆಸಿದ ಹಳಸಿದ ಮೀನುಗಳು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿ ನಾಶಪಡಿಸಲಾಗಿತ್ತು.
ಕರ್ನಾಟಕ, ತಮಿಳುನಾಡು ರಾಜ್ಯಗಳಿಂದ ಬರುವ ಇಂತಹ ಹಳಸಿದ ಮೀನುಗಳಿಗೆ ಮಾರುಕಟ್ಟೆಗಳಲ್ಲಿ ಭಾರೀ ಬೆಲೆ ಇದೆ. ರಾಸಾಯನಿಕ ಪದಾರ್ಥಗಳನ್ನು ಬೆರೆಸಿದ ದೊಡ್ಡ ಬೂತಾಯಿಗೆ ಕೆಜಿಗೆ 400 ರೂ., ಸಣ್ಣ ಬೂತಾಯಿಗೆ 200 ರೂ., ಐಸ್ ಬೆರೆಸಿದ ಸಣ್ಣ ಸಿಗಡಿಗೆ 300 ರೂ. ಇದೆ. ಮೀನುಗಾರಿಕೆ ನಿಷೇಧ ಹಾಗೂ ಪ್ರತಿಕೂಲ ಹವಾಮಾನ ಕಾರಣ ಮೀನುಗಾರಿಕೆ ನಡೆಸಲು ನಿಷೇಧ ಇರುವುದರಿಂದ ಬೆಲೆ ಏರಿಕೆಯಾಗಿದೆ.
.png)
0 Comments