ನವದೆಹಲಿ: ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಾಣಿಜ್ಯ ಎಲ್‌ಪಿಜಿ (LPG) ವಿತರಣೆಯ ಮೇಲೆ ವಿಧಿಸಲಾಗಿದ್ದ ತಾತ್ಕಾಲಿಕ ನಿರ್ಬಂಧಗಳನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿದೆ. ಈ ಕುರಿತು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಪತ್ರ ರವಾನಿಸಿದೆ. ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಕಾರ್ಯದರ್ಶಿ ನೀರಜ್ ಮಿತ್ತಲ್ ರಾಜ್ಯಗಳಿಗೆ ಕಳುಹಿಸಿರುವ ಪತ್ರದಲ್ಲಿ, ವಾಣಿಜ್ಯ ಎಲ್‌ಪಿಜಿ ಪೂರೈಕೆಯನ್ನು ಹಿಂದಿನ ಸ್ಥಿತಿಗೆ ಮರುಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮಾಹಿತಿಯ ಪ್ರಕಾರ, ಬಲ್ಕ್ ಎಲ್‌ಪಿಜಿ ಪೂರೈಕೆಯನ್ನು ಬಿಕ್ಕಟ್ಟಿನ ಪೂರ್ವದ ಬಳಕೆಯ ಶೇ.50ರ ಮಟ್ಟಿಗೆ ಮರುಸ್ಥಾಪಿಸುವ ಸಾಧ್ಯತೆಯಿದೆ. ಜೊತೆಗೆ, ದೀರ್ಘಕಾಲಿಕ ಪರಿಹಾರವಾಗಿ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಬಳಕೆಗೆ ಕ್ರಮೇಣ ವರ್ಗಾವಣೆಯಾಗುವಂತೆ ಕೇಂದ್ರ ಸರ್ಕಾರ ಮತ್ತೊಮ್ಮೆ ಸಲಹೆ ನೀಡಿದೆ. ಆದರೆ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆಯನ್ನು ಹಿಂತೆಗೆದುಕೊಳ್ಳುವ ಕುರಿತು ಇನ್ನೂ ಯಾವುದೇ ಅಧಿಕೃತ ನಿರ್ಧಾರ ಪ್ರಕಟವಾಗಿಲ್ಲ. ಈ ವಿಷಯದಲ್ಲಿ ತೈಲ ಮಾರುಕಟ್ಟೆ ಕಂಪನಿಗಳ ಸಭೆಯ ಬಳಿಕ ಅಂತಿಮ ತೀರ್ಮಾನ ಪ್ರಕಟವಾಗುವ ಸಾಧ್ಯತೆ ಇದೆ.

ಹಾರ್ಮುಜ್ ಜಲಸಂಧಿ ಮೂಲಕ ಸರಕು ಸಾಗಣೆ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳಿರುವುದರಿಂದ ದೇಶದಲ್ಲಿ ಉಂಟಾಗಿದ್ದ ಎಲ್‌ಪಿಜಿ ಪೂರೈಕೆ ಬಿಕ್ಕಟ್ಟು ಶಮನಗೊಂಡಿದೆ. ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಏರಿಕೆಯಿಂದ ಹೋಟೆಲ್ ಹಾಗೂ ಉಪಹಾರ ಮಂದಿರಗಳ ನಿರ್ವಹಣಾ ವೆಚ್ಚ ಹೆಚ್ಚಾಗಿದ್ದು, ಅದರ ಪರಿಣಾಮ ಆಹಾರ ದರಗಳ ಮೇಲೂ ಕಂಡುಬಂದಿತ್ತು. ಇದೀಗ ನಿರ್ಬಂಧ ತೆರವಿನಿಂದ ವಾಣಿಜ್ಯ ವಲಯಕ್ಕೆ ಸ್ವಲ್ಪ ನಿರಾಳತೆ ಸಿಕ್ಕಂತಾಗಿದೆ.