ವಿಟ್ಲ : ವಿಟ್ಲ-ಅಡ್ಯನಡ್ಕ ನಡುವಿನ ಪಡಿಬಾಗಿಲು ಮೈರ ಎಂಬಲ್ಲಿ ಜೀಪ್ ಹಾಗೂ ಕಾರು ಪರಸ್ಪರ ಡಿಕ್ಕಿಯಾ ಘಟನೆ ನಡೆದಿದೆ. ಎರಡೂ ವಾಹನಗಳು ಜಖಂಗೊಂಡಿದ್ದು, ಅದರಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಕಾಸರಗೋಡಿನ ನಾಗರಕಟ್ಟೆ ನಿವಾಸಿಗಳಾದ ಚಾಲಕ ಕೃಷ್ಣ, ಪ್ರಕಾಶ್, ಸುಜಾತ, ಸುಮಂಗಳ ಮತ್ತು ಶರಣ್ಯ ಸೇರಿದಂತೆ ಒಟ್ಟು 5 ಜನರು ಉಪ್ಪಿನಂಗಡಿಯಲ್ಲಿ ನಡೆಯುತ್ತಿದ್ದ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಸುಳ್ಯ ನಿವಾಸಿ ಉದಯನಾರಾಯಣ ಭಟ್ ಅವರು ಜೀಪಿನಲ್ಲಿ ಬಾಯಾರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಅಪಘಾತದ ತೀವ್ರತೆಗೆ ಕಾರಿನ ಬಾಗಿಲು ತೆರೆದುಕೊಂಡು, ಹಿಂಭಾಗದ ಸೀಟಿನಲ್ಲಿ ಕುಳಿತಿದ್ದ ಶರಣ್ಯ ಅವರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಅಪಘಾತ ನಡೆದ ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಹಾಗೂ ವಿಟ್ಲ ಪೊಲೀಸರು ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ರಸ್ತೆಗೆ ಅಡ್ಡಲಾಗಿ ನಿಂತಿದ್ದ ಜೀಪನ್ನು ಪಕ್ಕಕ್ಕೆ ಸರಿಸಿ ಸಂಚಾರವನ್ನು ಸುಗಮಗೊಳಿಸಲಾಗಿದೆ.