ಕಾಸರಗೋಡು : ಕಾಸರಗೋಡು ಜಿಲ್ಲಾ ಹೆಚ್ಚುವರಿ ದಂಡಾಧಿಕಾರಿ ಆಗಿ ಉದಯಕುಮಾರ್ ಪೆರ್ಲ ಅವರು ಇಂದು ಕುಮಾರಿ ಶ್ರುತಿ ಕೆ.ವಿ ಅವರಿಂದ ಅಧಿಕಾರ ಸ್ವೀಕರಿಸಿ ಹುದ್ದೆಯನ್ನು ಅಲಂಕರಿಸಿದರು. ಅಧಿಕಾರ ಸ್ವೀಕಾರದ ವೇಳೆ ಹುಜೂರ್ ಶಿರಸ್ತೆದಾರ್ ಸತೀಶ್ ಕುಮಾರ್, ಸುಪರಿಂಟೆಂಡೆಂಟ್ ಲೋಕೇಶ್ ಎಂ.ಬಿ ಮತ್ತು ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
ಉದಯಕುಮಾರ್ ಪೆರ್ಲ 1997ರಲ್ಲಿ ಕಾಸರಗೋಡು ಭೂಸ್ವಾಧೀನ ಕಚೇರಿಯಲ್ಲಿ ಎಲ್.ಡಿ. ಕ್ಲರ್ಕ್ ಆಗಿ ಸರ್ಕಾರಿ ಸೇವೆಗೆ ಸೇರ್ಪಡೆಯಾದರು. ಬಳಿಕ ಕಾಸರಗೋಡು ತಾಲ್ಲೂಕು ಕಚೇರಿಯಲ್ಲಿ ಸೀನಿಯರ್ ಕ್ಲರ್ಕ್ ಆಗಿ ಕಾರ್ಯನಿರ್ವಹಿಸಿದರು. 2006ರಲ್ಲಿ ಬಡ್ತಿ ಹೊಂದಿ ಗ್ರಾಮಾಧಿಕಾರಿ ಹುದ್ದೆಗೆ ನೇಮಕಗೊಂಡು ಶೇಣಿ, ಆದೂರು, ಬದಿಯಡ್ಕ, ಕುಂಬ್ಡಾಜೆ ಹಾಗೂ ಬೇಳ ಗ್ರಾಮಗಳಲ್ಲಿ ಗ್ರಾಮಾಧಿಕಾರಿಯಾಗಿ ಸೇವೆ ಸಲ್ಲಿಸಿದರು.
2014ರಲ್ಲಿ ಮತ್ತೊಮ್ಮೆ ಬಡ್ತಿ ಹೊಂದಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜೂನಿಯರ್ ಸೂಪರಿಂಟೆಂಡೆಂಟ್ ಆಗಿ ನೇಮಕಗೊಂಡರು. ನಂತರ ಮಂಜೇಶ್ವರ ತಾಲ್ಲೂಕು ಕಚೇರಿ, ಎಲ್.ಎ.ಎನ್.ಎಚ್. ಕಾಸರಗೋಡು ಹಾಗೂ ಆರ್.ಡಿ. ಕಚೇರಿ ಕಾಸರಗೋಡುಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. 2020ರಲ್ಲಿ ಬಡ್ತಿ ಹೊಂದಿ ಆರ್.ಡಿ. ಕಚೇರಿಯಲ್ಲಿ ಸೀನಿಯರ್ ಸೂಪರಿಂಟೆಂಡೆಂಟ್ ಆಗಿ ಕಾರ್ಯನಿರ್ವಹಿಸಿದರು. ಬಳಿಕ 2021ರಿಂದ 2025ರವರೆಗೆ ಕಾಸರಗೋಡು ಭೂ ನ್ಯಾಯಮಂಡಳಿಯಲ್ಲಿ ಸೇವೆ ಸಲ್ಲಿಸಿ, ಭೂ ಸುಧಾರಣೆಗೆ ಸಂಬಂಧಿಸಿದ ಅನೇಕ ಕಡತಗಳನ್ನು ಸಮಯೋಚಿತವಾಗಿ ವಿಲೇವಾರಿ ಮಾಡುವ ಮೂಲಕ ಗಮನಾರ್ಹ ಸೇವೆ ಸಲ್ಲಿಸಿದರು.
ಜಿಲ್ಲಾಡಳಿತದ 'ಆಪರೇಶನ್ ಸ್ಮೈಲ್' ಯೋಜನೆಯಡಿ ಪಾವೂರು, ಉದ್ಯಾವರ ಹಾಗೂ ಕುಂಜತ್ತೂರು ಗ್ರಾಮಗಳ ವ್ಯಾಪ್ತಿಯ 135 ಕೊರಗ ಸಮುದಾಯದ ಕುಟುಂಬಗಳಿಗೆ ಕ್ರಯ ಪ್ರಮಾಣಪತ್ರಗಳನ್ನು ವಿತರಿಸುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದಕ್ಕಾಗಿ ಜಿಲ್ಲಾಧಿಕಾರಿಗಳ 'ಉತ್ತಮ ಸೇವೆಗೆ ಇರುವ ಪ್ರಶಸ್ತಿ'ಗೆ ಭಾಜನರಾದರು.
ಇವರು ಮಂಜೇಶ್ವರ ತಾಲ್ಲೂಕಿನ ಎಣ್ಮಕಜೆ ಗ್ರಾಮದ ಪೆರ್ಲದ ದಿವಂಗತ ಮಾಧವ ಚೆಟ್ಟಿಯಾರ್ ಮತ್ತು ಶಾರದ ದಂಪತಿಗಳ ಪುತ್ರರಾಗಿದ್ದಾರೆ.

0 Comments