ಕಾಸರಗೋಡು : ಕೂಲಿ ಹಣದ ವಿಚಾರವಾಗಿ ಉಂಟಾದ ವಿವಾದದ ಹಿನ್ನೆಲೆ ವಲಸೆ ಕಾರ್ಮಿಕನೊಬ್ಬನ ಮೇಲೆ ಸೀಮೆ ಎಣ್ಣೆ  ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ ಘಟನೆ ಕಾಸರಗೋಡು ಜಿಲ್ಲೆಯ ಮೊಗ್ರಾಲ್‌ನಲ್ಲಿ ನಡೆದಿದೆ.

ಕರ್ನಾಟಕದ ಹುಬ್ಬಳ್ಳಿ ಮೂಲದ ಅಬ್ದುಲ್ ಗಫೂರ್(45) ದಾಳಿಗೆ ಒಳಗಾದ ಕಾರ್ಮಿಕ. ಅವರು ಹಲವು ವರ್ಷಗಳಿಂದ ಮೊಗ್ರಾಲ್ ಕೊಪ್ಪಳದ ಬಾಡಿಗೆ ನಿವಾಸದಲ್ಲಿ ವಾಸವಿದ್ದು,  ಪ್ಲಾಸ್ಟರಿಂಗ್ ಕೆಲಸ ಮಾಡುತ್ತಿದ್ದರು. 

ಮಾಹಿತಿಯ ಪ್ರಕಾರ, ಕೆಲಸ ಮಾಡಿದ ಕೂಲಿ ಹಣ ನೀಡದಿದ್ದ ಕಾರಣ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಇಂದು ಮುಂಜಾನೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬಂದು ಅಬ್ದುಲ್ ಗಫೂರ್ ಅವರ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲಾಗಿದ್ದು, ಗಫೂರ್ ಅವರ ಕಿರುಚಾಟ ಕೇಳಿ ಸ್ಥಳೀಯರು ಧಾವಿಸಿ ಬೆಂಕಿ ನಂದಿಸಿ ತಕ್ಷಣ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮೂಲದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.