ಜೈಪುರ : ರಾಜಸ್ಥಾನದ ದೌಸಾ ಜಿಲ್ಲೆಯ ದೆಹಲಿ–ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್‌ಗೆ ಬೆಂಕಿ ಹೊತ್ತಿಕೊಂಡು ಏಳು ಮಂದಿ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ದುರ್ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಹರಿದ್ವಾರದಿಂದ ಮಧ್ಯಪ್ರದೇಶದ ಇಂದೋರ್‌ಗೆ 39 ಪ್ರಯಾಣಿಕರೊಂದಿಗೆ ತೆರಳುತ್ತಿದ್ದ ಖಾಸಗಿ ಬಸ್, ಕೊಲಾವಾ ಪೊಲೀಸ್ ಠಾಣಾ ವ್ಯಾಪ್ತಿಯ ದ್ವಾರಪುರ ಗ್ರಾಮದ ಸಮೀಪ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕ್ಷಣಾರ್ಧದಲ್ಲೇ ಬಸ್‌ಗೆ ಬೆಂಕಿ ವ್ಯಾಪಿಸಿ ಪ್ರಯಾಣಿಕರಲ್ಲಿ ಆತಂಕ ಉಂಟಾಯಿತು.
ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು, ಅಗ್ನಿಶಾಮಕ ದಳ ಹಾಗೂ ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್‌ನಲ್ಲಿದ್ದ ಹೆಚ್ಚಿನ ಪ್ರಯಾಣಿಕರು ಮಧ್ಯಪ್ರದೇಶ ಮೂಲದವರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೌಸಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿಯೂಷ್ ದೀಕ್ಷಿತ್ ಅವರ ಪ್ರಕಾರ, ಬೆಂಕಿಯಲ್ಲಿ ಐವರು ಸಜೀವ ದಹನಗೊಂಡಿದ್ದು, ಮತ್ತಿಬ್ಬರು ತಲೆಗೆ ಗಂಭೀರ ಗಾಯಗಳಾಗಿ ಮೃತಪಟ್ಟಿದ್ದಾರೆ. ಉತ್ತರಾಖಂಡದ ಋಷಿಕೇಶದಿಂದ ಇಂದೋರ್‌ಗೆ ಸಂಚರಿಸುತ್ತಿದ್ದ ಈ ಬಸ್ ಅನ್ನು ಇಂದೋರ್ ಮೂಲದ 'ಹ್ಯಾನ್ಸ್ ಟ್ರಾವೆಲ್ಸ್' ಸಂಸ್ಥೆ ನಿರ್ವಹಿಸುತ್ತಿತ್ತು ಎಂದು ಅವರು ತಿಳಿಸಿದ್ದಾರೆ.
ಅಪಘಾತದ ಹಿನ್ನೆಲೆಯಲ್ಲಿ ದೆಹಲಿ–ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ರಕ್ಷಣಾ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಪೊಲೀಸರು ವಾಹನಗಳನ್ನು ಪರ್ಯಾಯ ಮಾರ್ಗಗಳಿಗೆ ತಿರುಗಿಸಿದರು. ಅಪಘಾತಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

0 Comments