ತಿರುವನಂತಪುರ : ಒಂಟಿಯಾಗಿ ವಾಸಿಸುತ್ತಿದ್ದ 76 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದು, ಸುಮಾರು ಒಂದು ತಿಂಗಳ ಬಳಿಕ ಅವರ ಮೃತದೇಹ ಅಸ್ಥಿಪಂಜರದ ಸ್ಥಿತಿಯಲ್ಲಿ ಮನೆಯಿಂದ ಪತ್ತೆಯಾದ ಘಟನೆ ತಿರುವನಂತಪುರದಲ್ಲಿ ನಡೆದಿದೆ. ಮೃತರನ್ನು ಕರಕುಳಂ ನೆಲ್ಲಿವಿಳ ಜಯಭವನದ ರವೀಂದ್ರನ್ (76) ಎಂದು ಗುರುತಿಸಲಾಗಿದೆ. ಅವರು ಈ ಹಿಂದೆ ಪಾಳಯಂ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ನಡೆಸುತ್ತಿದ್ದರು.
ಕಳೆದ ಒಂದು ತಿಂಗಳಿನಿಂದ ರವೀಂದ್ರನ್ ಹೊರಗೆ ಕಾಣಿಸದ ಹಿನ್ನೆಲೆಯಲ್ಲಿ ಅನುಮಾನ ವ್ಯಕ್ತವಾಗಿತ್ತು. ಕೆಲವು ದಿನಗಳ ಹಿಂದೆ ಕ್ಷೇಮ ಪಿಂಚಣಿ ವಿತರಿಸಲು ಸಿಬ್ಬಂದಿ ಮನೆಗೆ ತೆರಳಿದಾಗ ಹಲವು ಬಾರಿ ಕರೆದರೂ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ನಂತರ ಮತ್ತೊಮ್ಮೆ ಭೇಟಿ ನೀಡಿದರೂ ಅವರು ಕಾಣಿಸದ ಕಾರಣ ಸ್ಥಳೀಯರಿಗೆ ಮಾಹಿತಿ ನೀಡಲಾಯಿತು. ಬೇರೆಡೆ ವಾಸಿಸುತ್ತಿದ್ದ ಪುತ್ರನನ್ನು ಕರೆಸಿ ಬಾಗಿಲು ತೆರೆಯಲು ಪ್ರಯತ್ನಿಸಿದರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ನೆಡುಮಂಗಾಡು ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಪೊಲೀಸರು ಸ್ಥಳಕ್ಕೆ ಆಗಮಿಸಿ ಮನೆ ಬಾಗಿಲು ತೆರೆದು ಪರಿಶೀಲಿಸಿದಾಗ, ಮಂಚದ ಮೇಲೆ ತಲೆಬುರುಡೆ ಮತ್ತು ಎಲುಬುಗಳು ಮಾತ್ರ ಉಳಿದಿದ್ದ ಅಸ್ಥಿಪಂಜರದ ಸ್ಥಿತಿಯಲ್ಲಿ ರವೀಂದ್ರನ್ ಅವರ ಮೃತದೇಹ ಪತ್ತೆಯಾಯಿತು. ದೇಹದ ಮಾಂಸದ ಭಾಗಗಳು ಸಂಪೂರ್ಣ ಕೊಳೆತು ಹೋಗಿದ್ದವು.
ಮರಣೋತ್ತರ ಪರೀಕ್ಷೆಯಲ್ಲಿ ಮೃತದೇಹಕ್ಕೆ ಒಂದು ತಿಂಗಳಿಗೂ ಹೆಚ್ಚು ಕಾಲ ಕಳೆದಿರುವುದು ದೃಢಪಟ್ಟಿದೆ. ಐದು ವರ್ಷಗಳ ಹಿಂದೆ ಪತ್ನಿ ನಿಧನರಾದ ಬಳಿಕ ರವೀಂದ್ರನ್ ಒಬ್ಬರೇ ವಾಸಿಸುತ್ತಿದ್ದರು. ಅವರಿಗೆ ಜಯಕುಮಾರ್, ಗಿರೀಶ್ ಕುಮಾರ್ ಮತ್ತು ಲತಾಕುಮಾರಿ ಎಂಬ ಮೂವರು ಮಕ್ಕಳಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
.png)
0 Comments