ಕಾಸರಗೋಡು : ಕಾಸರಗೋಡು ಜಿಲ್ಲೆಯ ಅತ್ಯಂತ ಹಿರಿಯ ಮತದಾರರಾಗಿ ಗುರುತಿಸಿಕೊಂಡಿದ್ದ ಪನತ್ತಡಿ ನಿವಾಸಿ ವೆಂಕಪ್ಪ ನಾಯ್ಕ (106) ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಪ್ರಜಾಪ್ರಭುತ್ವದ ಮೇಲೆ ಅಪಾರ ನಂಬಿಕೆ ಹೊಂದಿದ್ದ ವೆಂಕಪ್ಪ ನಾಯ್ಕ, ಯಾವುದೇ ಚುನಾವಣೆಯನ್ನೂ ತಪ್ಪಿಸದೇ ಮತದಾನ ಮಾಡುವ ಮೂಲಕ ಆದರ್ಶ ಮತದಾರರಾಗಿ ಗುರುತಿಸಿಕೊಂಡಿದ್ದರು.
ಕಾಸರಗೋಡು ಜಿಲ್ಲೆಯ ಅತ್ಯಂತ ಹಿರಿಯ ಮತದಾರರಾಗಿದ್ದ ವೆಂಕಪ್ಪ ನಾಯಕ್ ವಯೋ ಸಹಜ ಮಿತಿಗಳಿದ್ದರೂ, ಮತದಾನದ ಉತ್ಸಾಹ ಕಳೆಗುಂದದ ಇವರು ಕೋರೋನ ನೀತಿ ಸಂಹಿತೆಯಡಿ ಮನೆಯಿಂದಲೇ ಮತ ಚಲಾಯಿಸಿದ್ದರು. ಅವರ ಪ್ರಜಾಸತ್ತಾತ್ಮಕ ಬದ್ಧತೆಯನ್ನು ಮೆಚ್ಚಿ ಚುನಾವಣಾ ಆಯೋಗದ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಗೌರವಿಸಿದ್ದೂ ವಿಶೇಷ. ತನ್ನ 105 ನೇ ವಯಸ್ಸಿನಲ್ಲಿ ಕೊನೆಯ ಮತದಾನ ಗೈದಿದ್ದರು. ಪನತ್ತಡಿ ಪಂಚಾಯತ್‌ನ ವಾರ್ಡ್ 3 ರ ಚಾಮುಂಡಿ ಕುನ್ನು ಶಾಲೆಗೆ ತಮ್ಮ ಕುಟುಂಬದೊಂದಿಗೆ ತಲುಪಿದ ನಂತರ ಅವರು ಮತ ಚಲಾಯಿಸಿದ್ದರು. ಕೃಷಿ ಕ್ಷೇತ್ರದಲ್ಲಿಯೂ ತಮ್ಮದೇ ಆದ ಸಾಧನೆ ಮಾಡಿದ್ದ ಅವರು, ಪನತ್ತಡಿ ಗ್ರಾಮ ಪಂಚಾಯತ್‌ನ "ಶ್ರೇಷ್ಠ ಕೃಷಿಕ" ಪ್ರಶಸ್ತಿಗೆ ಭಾಜನರಾಗಿದ್ದರು.
ಮಂಗಳವಾರ ನಿಧನರಾದ ವೆಂಕಪ್ಪ ನಾಯ್ಕ ಅವರ ಅಂತ್ಯಕ್ರಿಯೆ ಬುಧವಾರ ಬೆಳಿಗ್ಗೆ ನೆರವೇರಿತು. ಪತ್ನಿ ಅಕ್ಕು ಬಾಯಿ ಅವರು ಈ ಹಿಂದೆಯೇ ನಿಧನರಾಗಿದ್ದು, ಪುತ್ರರಾದ ತಿಮ್ಮು ನಾಯ್ಕ, ಸುಂದರ, ಅಪ್ಪಯ್ಯ, ನಿವೃತ್ತ ಕಾರ್ಮಿಕ ಅಧಿಕಾರಿ ಕೇಶವ, ಕೆ. ಬಾಲಕೃಷ್ಣ (ನಿವೃತ್ತ ಪಂಚಾಯತ್ ಕಾರ್ಯದರ್ಶಿ), ಶ್ರೀಧರ್ ಹಾಗೂ ಪುತ್ರಿಯರಾದ ರಾಧಾಮಣಿ, ಸರೋಜಿನಿ, ಕುಮಾರಿ ಸೇರಿದಂತೆ ಅಪಾರ ಬಂಧುಬಳಗವನ್ನು ಅವರು ಅಗಲಿದ್ದಾರೆ.

0 Comments