ಕಾಸರಗೋಡು : ಸ್ನೇಹಿತರೊಂದಿಗೆ ನದಿಯಲ್ಲಿ ಸ್ನಾನಕ್ಕಿಳಿದ ಯುವಕನೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿ ನಾಪತ್ತೆಯಾದ ಘಟನೆ ಬೇಡಡ್ಕದ ಪಾಂಡಿಕ್ಕಂಡದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.

ಮಣ್ಣಡ್ಕ ನಿವಾಸಿ ಮಾಧವನ್ ಅವರ ಪುತ್ರ ಅರ್ಜುನ್ (26) ನಾಪತ್ತೆಯಾದ ಯುವಕ. ಪಾಂಡಿಕ್ಕಂಡಂ ರೆಗ್ಯುಲೇಟರ್ ಕಂ ಬ್ರಿಡ್ಜ್ ಸಮೀಪ ಪಯಸ್ವಿನಿ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾರೆ ಎನ್ನಲಾಗಿದೆ.

ಮಾಹಿತಿ ತಿಳಿದು ಕುಟ್ಟಿಕೋಲ್‌ನ ಅಗ್ನಿಶಾಮಕ ದಳ ಹಾಗೂ ಕಾಸರಗೋಡಿನಿಂದ ಸ್ಕೂಬಾ ತಂಡ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಆದೂರು ಪೊಲೀಸರೂ ಸ್ಥಳದಲ್ಲಿದ್ದಾರೆ.