ತೆಲಂಗಾಣದಲ್ಲಿ ವ್ಯಕ್ತಿಯೊಬ್ಬ ತನಗೆ ಮೂರನೇ ಮಗುವೂ ಹೆಣ್ಣಾಗಬಹುದು ಎಂಬ ಭಯದಿಂದ ಗರ್ಭಿಣಿ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಂದಿರುವ ಘಟನೆ ವರದಿಯಾಗಿದೆ.
ಅಜರುದ್ದೀನ್ ಎಂಬ ವ್ಯಕ್ತಿಗೆ ಈಗಾಗಲೇ ಇಬ್ಬರು ಹೆಣ್ಣುಮಕ್ಕಳಿದ್ದರು. ಅವರ ಪತ್ನಿ ಗರ್ಭಿಣಿಯಾಗಿದ್ದರು. ಈಗಾಗಲೇ ಇಬ್ಬರು ಹೆಣ್ಣುಮಕ್ಕಳು ಇದ್ದುದರಿಂದ ಈ ಬಾರಿಯೂ ಹೆಣ್ಣುಮಗುವಾಗುತ್ತದೆ ಎಂದು ಆತನಿಗೆ ಆತಂಕವಿತ್ತು. ಆಕೆ ಗರ್ಭಪಾತ ಮಾಡಿಸಿಕೊಳ್ಳಲು ನಿರಾಕರಿಸಿದ್ದರಿಂದ ಆತನ ಭಯ ಹೆಚ್ಚಾಗಿತ್ತು. ಎರಡು ಬಾರಿ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದರೂ ಆಕೆ ಒಪ್ಪಿರಲಿಲ್ಲ. ಅಜರುದ್ದೀನ್ ಮತ್ತು ಫರ್ಹತ್ ಅವರಿಗೆ ಉಮೇರಾ (8) ಮತ್ತು ಆಯೇಷಾ (6) ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು. ಇಬ್ಬರು ಹೆಣ್ಣು ಮಕ್ಕಳ ಜನನದ ನಂತರ ಫರ್ಹತ್ ಮತ್ತೆ 2 ಬಾರಿ ಗರ್ಭಿಣಿಯಾಗಿದ್ದರು. ಆದರೆ ಎರಡೂ ಬಾರಿ ಆಕೆ ಇನ್ನೊಂದು ಹೆಣ್ಣು ಮಗುವಿಗೆ ಜನ್ಮ ನೀಡುತ್ತಾರೆ ಎಂಬ ಭಯದಿಂದ ಅಜರುದ್ದೀನ್ ಗರ್ಭಪಾತ ಮಾಡಿಸಿದ್ದ. ಅದಾದ 4 ವರ್ಷಗಳ ನಂತರ ಆಕೆ ಮತ್ತೆ ಗರ್ಭಿಣಿಯಾಗಿದ್ದರು. ಈ ಬಾರಿಯೂ ಹೆಣ್ಣುಮಗುವೇ ಆಗುತ್ತದೆ ಎಂದು ಅಜರುದ್ದೀನ್ಗೆ ಅನಿಸತೊಡಗಿತ್ತು. ಹೀಗಾಗಿ, ಮತ್ತೆ ಗರ್ಭಪಾತ ಮಾಡಿಸಿಕೊಳ್ಳಲು ಒತ್ತಾಯಿಸಿದ್ದ. ಆದರೆ, ಈ ಬಾರಿ ಆಕೆ ಅದಕ್ಕೆ ಒಪ್ಪಿರಲಿಲ್ಲ. ಏನೇ ಆದರೂ ಈ ಮಗುವಿಗೆ ಜನ್ಮ ನೀಡುತ್ತೇನೆ ಎಂದು ಆಕೆ ಹಠ ಹಿಡಿದಿದ್ದರು. ಇದರಿಂದ ಆತ ಕೋಪಗೊಂಡಿದ್ದ.
ಈ ಹಿನ್ನೆಲೆಯಲ್ಲಿ ಆತ ತನ್ನ ಹೆಂಡತಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಈಜುಕೊಳಕ್ಕೆ ತಳ್ಳಿ, ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದು, ಆ ಬಳಿಕ ಇದೊಂದು ಆಕಸ್ಮಿಕ ಸಾವು ಎಂದು ಎಲ್ಲರನ್ನೂ ನಂಬಿಸಿದ್ದಾನೆ. ಮೃತ ಮಹಿಳೆಯ ಕುಟುಂಬಸ್ಥರ ಅನುಮಾನದಿಂದಾಗಿ ಆತ ಸಿಕ್ಕಿಹಾಕಿಕೊಂಡಿದ್ದಾನೆ. ತನ್ನ ಮಗಳು ಮತ್ತು ಮೊಮ್ಮಕ್ಕಳ ಸಾವು ಸಹಜವಲ್ಲ ಎಂದು ಫರ್ಹತ್ನ ತಂದೆ ಅನುಮಾನ ವ್ಯಕ್ತಪಡಿಸಿ ಅಜರುದ್ದೀನ್ ವಿರುದ್ಧ ಆರೋಪ ಮಾಡಿದ್ದರು. ಇದರ ಆಧಾರದ ಮೇಲೆ ಪೊಲೀಸರು ಅವನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆ ಸಮಯದಲ್ಲಿ ಆತ ತಾನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

0 Comments