ಕಾಸರಗೋಡು : ಕಾಸರಗೋಡು ಜಿಲ್ಲೆಯಲ್ಲಿ ಭಾಷಾ ಅಲ್ಪಸಂಖ್ಯಾತರ ಸಂವಿಧಾನಬದ್ಧ ಹಕ್ಕುಗಳ ರಕ್ಷಣೆ ಹಾಗೂ ಕನ್ನಡ ಭಾಷೆಯ ಬಳಕೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಜಿಲ್ಲಾ ಭಾಷಾ ಅಲ್ಪಸಂಖ್ಯಾತರ ಸಮಿತಿ ಸಭೆ ಕಾಸರಗೋಡು ಕಲಕ್ಟರೇಟ್‌ನ ಮಿನಿ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆಯಿತು. ಉಪ ಜಿಲ್ಲಾಧಿಕಾರಿ ಹಾಗೂ ಎಡಿಎಂ ಉದಯಕುಮಾರ್ ಪಿ. ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಸೇರಿದಂತೆ ಸಮಿತಿಯ ಸದಸ್ಯರು ಭಾಗವಹಿಸಿದರು.

ಕಾಸರಗೋಡಿನಲ್ಲಿ ಕನ್ನಡ ಸರ್ಕಾರಿ ಮುದ್ರಣಾಲಯ ಸ್ಥಾಪನೆ, ಕನ್ನಡ ಭಾಷಾಂತರ ವಿಭಾಗ ಆರಂಭ, ಜಿಲ್ಲಾ ಮಾಹಿತಿ ಕಚೇರಿಯಲ್ಲಿ ಕನ್ನಡ ಸಹಾಯಕ ಮಾಹಿತಿ ಅಧಿಕಾರಿ ಹುದ್ದೆ ಸೃಷ್ಟಿ ಹಾಗೂ ಸರ್ಕಾರಿ ಆದೇಶಗಳು ಮತ್ತು ಸುತ್ತೋಲೆಗಳನ್ನು ಕನ್ನಡದಲ್ಲಿಯೂ ಪ್ರಕಟಿಸುವುದು ಸೇರಿದಂತೆ ಹಲವು ವರ್ಷಗಳಿಂದ ಬಾಕಿ ಇರುವ ಬೇಡಿಕೆಗಳನ್ನು ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು. ಭಾಷಾ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಂಡು, ಈ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಈಡೇರಿಸಲು ಪ್ರಯತ್ನಿಸುವುದಾಗಿ ಶಾಸಕ ಎ.ಕೆ.ಎಂ. ಅಶ್ರಫ್ ಭರವಸೆ ನೀಡಿದರು.

ಭಾಷಾ ಅಲ್ಪಸಂಖ್ಯಾತ ಪ್ರದೇಶಗಳ ಸರ್ಕಾರಿ ಕಚೇರಿಗಳ ನಾಮಫಲಕಗಳು ಮತ್ತು ಸಾರ್ವಜನಿಕ ಮಾಹಿತಿಗಳನ್ನು ಕನ್ನಡದಲ್ಲಿಯೂ ಪ್ರದರ್ಶಿಸುವುದು, ತೆರಿಗೆ ಪಾವತಿ ರಸೀದಿಗಳನ್ನು ಕನ್ನಡದಲ್ಲಿಯೂ ಲಭ್ಯವಾಗುವಂತೆ ಮಾಡುವುದು, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸ್ಥಳನಾಮ ಫಲಕಗಳನ್ನು ಕನ್ನಡದಲ್ಲಿಯೂ ಅಳವಡಿಸುವುದು ಹಾಗೂ ಕನ್ನಡ ಬಲ್ಲ ಸಿಬ್ಬಂದಿಯ ನೇಮಕಾತಿಗೆ ಕ್ರಮ ಕೈಗೊಳ್ಳುವಂತೆ ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ಕೆ.ಎಂ. ಬಳ್ಳಾಕುರಾಯ ಮನವಿ ಮಾಡಿದರು. ಕಚೇರಿಗಳ ಸಭಾ ಸೂಚನೆಗಳು, ಸಾರ್ವಜನಿಕ ಪ್ರಕಟಣೆಗಳು ಮತ್ತು ಅಂಗನವಾಡಿ ಕಾರ್ಯಕರ್ತರ ಕೈಪಿಡಿಗಳನ್ನು ಕನ್ನಡದಲ್ಲಿಯೂ ಮುದ್ರಿಸುವಂತೆ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಒತ್ತಾಯಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಐಸಿಡಿಎಸ್ ಮೇಲ್ವಿಚಾರಕರ ಹುದ್ದೆಗಳಿಗೆ ಕನ್ನಡ ಬಲ್ಲವರ ನೇಮಕಾತಿ ಹಾಗೂ ಅಕ್ಷಯ ಕೇಂದ್ರಗಳಲ್ಲಿ ಕನ್ನಡ ಭಾಷಾ ಸಾಫ್ಟ್‌ವೇರ್ ಅಳವಡಿಸುವ ಕುರಿತು ಕೂಡ ಸಭೆಯಲ್ಲಿ ಚರ್ಚಿಸಲಾಯಿತು. 2018ರಲ್ಲಿ ರಚಿಸಲಾದ ಪ್ರಸ್ತುತ ಜಿಲ್ಲಾ ಭಾಷಾ ಅಲ್ಪಸಂಖ್ಯಾತರ ಸಮಿತಿಯನ್ನು ಹೊಸ ತಲೆಮಾರಿನ ಕನ್ನಡ ಹೋರಾಟಗಾರರನ್ನು ಒಳಗೊಂಡಂತೆ ಪುನರ್‌ರಚಿಸಬೇಕೆಂದು ಕಾಸರಗೋಡು ಸಂಸದರ ನಾಮನಿರ್ದೇಶಿತ ಸದಸ್ಯ ವಸಂತ ಕುಮಾರ್ ಸಿ.ಕೆ. ಮನವಿ ಮಾಡಿದರು.

ಸಭೆಯಲ್ಲಿ ಭಾಷಾ ಅಲ್ಪಸಂಖ್ಯಾತ ಪ್ರದೇಶಗಳ ಸರ್ಕಾರಿ ಕಚೇರಿಗಳ ನಾಮಫಲಕ ಹಾಗೂ ಸಾರ್ವಜನಿಕ ಮಾಹಿತಿಗಳನ್ನು ಕನ್ನಡದಲ್ಲಿಯೂ ಪ್ರದರ್ಶಿಸಲು, ಅಂಗನವಾಡಿ ಕಾರ್ಯಕರ್ತರ ಕೈಪಿಡಿಗಳನ್ನು ಕನ್ನಡದಲ್ಲಿಯೂ ಮುದ್ರಿಸಲು, ಜಿಲ್ಲಾ ಮಾಹಿತಿ ಕಚೇರಿಯಲ್ಲಿ ಕನ್ನಡ ಸಹಾಯಕ ಮಾಹಿತಿ ಅಧಿಕಾರಿ ಹುದ್ದೆ ಸೃಷ್ಟಿಸಲು ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸ್ಥಳನಾಮ ಫಲಕಗಳನ್ನು ಕನ್ನಡದಲ್ಲಿಯೂ ಪ್ರದರ್ಶಿಸಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು. ಅಲ್ಲದೆ, ಜಿಲ್ಲಾ ಭಾಷಾ ಅಲ್ಪಸಂಖ್ಯಾತರ ಸಮಿತಿ ಸಭೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಡಾ. ರಾಧಾಕೃಷ್ಣ ಎನ್. ಬೆಳ್ಳೂರು, ಕೆ.ಎಂ. ಬಳ್ಳಾಕುರಾಯ, ವಿಶಾಲಾಕ್ಷ ಪುತ್ರಕಳ, ಸುಕೇಶ ಎ., ಸ್ಟೀಫನ್ ಕ್ರಾಸ್ಟ, ವಸಂತ ಕುಮಾರ್ ಸಿ.ಕೆ., ರಾಜೇಶ್ ಎಚ್.ಜೆ., ಲೋಕೇಶ ಎಂ.ಬಿ. ಹಾಗೂ ಜಗದೀಶ ಕೆ. ಅನೂಪ್ ಕೆ.ಎಂ ಉಪಸ್ಥಿತರಿದ್ದರು.


ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್


https://www.instagram.com/visheshachannel/

https://www.facebook.com/profile.php?id=61572771802334

https://x.com/VisheshaC4541

https://www.linkedin.com/in/visheshachannel/

www.youtube.com/@VisheshaChannelofficial



#news #viral #blogger #viralnews #dailypost