Ticker

6/recent/ticker-posts

ಪೆರ್ಲದ ಪಳ್ಳಕ್ಕಾನದಲ್ಲಿ ಹಾರ್ಟಿಕಲ್ಚರ್ ಹಬ್ ಉದ್ಘಾಟನೆ

 


ಪೆರ್ಲ : ಆದಾಯ, ಲಾಭವನ್ನು ಮಾತ್ರ ಪರಿಗಣಿಸಿ ಎಲ್ಲರೂ ಒಂದೇ ಕೃಷಿಯಲ್ಲಿ ತೊಡಗಿಕೊಂಡರೆ ಉತ್ಪನ್ನಗಳಿಗೆ ಬೇಡಿಕೆ ಹಾಗೂ ಬೆಲೆ ಕುಸಿಯುವ ಸಾಧ್ಯತೆ ಇದೆ. ಈ ಪರಿಸ್ಥಿತಿಯಿಂದ ಕೃಷಿಕರನ್ನು ಪಾರು ಮಾಡಲು ಸರಕಾರವು ಜಾಗಕ್ಕೆ ಸರಿ ಹೊಂದುವ ಬೇರೆ ಬೇರೆ ಕೃಷಿಗೆ ಸಬ್ಸಿಡಿ ಒದಗಿಸುತ್ತಿದೆ ಎಂದು ಸಹಕಾರ ಸಂಘಗಳ ನೋಂದಣಿ ಅಧಿಕಾರಿ ಡಾ.ಡಿ.ಸಜಿತ್ ಬಾಬು ಅಭಿಪ್ರಾಯಪಟ್ಟರು.

ಅವರು ಕೇರಳ ಸರಕಾರದ 2025-26ರ ವಾರ್ಷಿಕ ಅಭಿವೃದ್ಧಿ ಯೋಜನೆಯಂತೆ ಸಹಕಾರಿ ಇಲಾಖೆ ಜಾರಿಗೆ ತಂದಿರುವ ತೋಟಗಾರಿಕಾ ಹಬ್ ಯೋಜನೆಯಂತೆ ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಎಣ್ಮಕಜೆ ಗ್ರಾಪಂ ಪಳ್ಳಕಾನದಲ್ಲಿ 15 ವರ್ಷಕ್ಕೆ ಲೀಸ್ ಗೆ ಪಡೆದ 5 ಎಕರೆ ಖಾಸಗಿ ಜಾಗದಲ್ಲಿ ಆರಂಭಿಸಲಾದ ರಂಬುಟಾನ್ ಹಣ್ಣಿನ ತೋಟಗಾರಿಕಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ಕಾಸರಗೋಡು ಜಿಲ್ಲೆಯಲ್ಲಿ ಈಗಲೂ 95 ಸಾವಿರ ಎಕರೆ ಖಾಲಿ ಜಾಗವಿದೆ. ಇದರಲ್ಲಿ ಶೇ. 10ನ್ನಾದರೂ ಕೃಷಿಗೆ ಬಳಸಬೇಕು. ಇಲ್ಲಿನ ಹವಾಮಾನ ಸ್ಥಿತಿ ಗತಿಗಳನ್ನು ಪರಿಗಣಿಸಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯಿರುವ ಹಣ್ಣುಗಳ ಕೃಷಿಯಿಂದ ಹೆಚ್ಚು ಲಾಭ ಪಡೆಯಬಹುದು. ಸಂದರ್ಭಕ್ಕೆ ಹೊಂದಿಕೊಳ್ಳುವ ಪರ್ಯಾಯ ಕೃಷಿ ವ್ಯವಸ್ಥೆಯಿಂದ ಭರ್ಜರಿ ಇಳುವರಿ, ಸುಸ್ಥಿರ ಆದಾಯವನ್ನು ಕಂಡುಕೊಳ್ಳಹುದು ಎಂದರು.

ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ಶ್ಯಾಮಲಾ ಆರ್. ಭಟ್ ಅಧ್ಯಕ್ಷತೆ ವಹಿಸಿದ್ದರು. ಕೇರಳ ಬ್ಯಾಂಕ್ ನಿರ್ದೇಶಕ ಸಾಬು ಅಬ್ರಹಾಂ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕೃಷಿ ಹಬ್ ಗೆ ಜಾಗ ಒದಗಿಸಿದ ಶ್ರೀಧರ ಭಟ್ ಹಾಗೂ ಅನನಾಸು ಕೃಷಿಯಲ್ಲಿ ಸಾಧನೆ ಮಾಡಿದ ವಿಶ್ವೇಶ್ವರ ಪಂಜೆ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಸಹಕಾರ ಸಂಘದ ಜಂಟಿ ನಿಬಂಧಕ ವಿ.ಚಂದ್ರನ್, ಮಂಜೇಶ್ವರ ಸಹಾಯಕ ರಿಜಿಸ್ಟ್ರಾರ್ ರವೀಂದ್ರ ಎ., ಕಾಸರಗೋಡು ಜಂಟಿ ರಿಜಿಸ್ಟ್ರಾರ್ ಜಯಚಂದ್ರನ್ ಎ., ಸರ್ಕಲ್ ಕೋ-ಆಪ್ ಯೂನಿಯನ್ ಅಧ್ಯಕ್ಷ ಜಯಾನಂದ ಕೆ.ಆರ್., ಮಂಜೇಶ್ವರ ಸಹಕಾರಿ ಸಂಘಗಳ ನಿರೀಕ್ಷಕ ಬೈಜುರಾಜ್, ಎಣ್ಮಕಜೆ ಗ್ರಾಪಂ ಸದಸ್ಯ ರಾಧಾಕೃಷ್ಣ ಜೆ.ಎಸ್.ಮತ್ತಿತರರು ಉಪಸ್ಥಿತರಿದ್ದರು.

ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಕಾರ್ಯದರ್ಶಿ ಪ್ರಭಾಕರ ಕೆ.ಪಿ. ಸ್ವಾಗತಿಸಿದರು. ಉಪಾಧ್ಯಕ್ಷ ರಮೇಶ್ ಎನ್. ವಂದಿಸಿದರು. ಸಿಬ್ಬಂದಿ ಸುರೇಶ್ ವಾಣೀನಗರ ಮತ್ತು ಅಜಿತ್ ಪೆರ್ಲ ನಿರೂಪಿಸಿದರು.


Post a Comment

0 Comments