ಬಂಟ್ವಾಳ : ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೊಬ್ಬರಿಗೆ ಹೆರಿಗೆಯಾದ ಘಟನೆ ಬಿ.ಸಿ. ರೋಡಿನಲ್ಲಿ ರಾತ್ರಿ ವೇಳೆ ನಡೆದಿದೆ. ಮಂಗಳೂರಿನಿಂದ - ಬೆಂಗಳೂರಿಗೆ ತೆರಳುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ತುಂಬು ಗರ್ಭಿಣಿ ಮಹಿಳೆಯೋರ್ವಳಿಗೆ ಹೆರಿಗೆ ನೋವು ಕಾಣಿಸಿಕೊಂಡು ಬಳಿಕ ಬಿಸಿರೋಡಿನ ರೈಲ್ವೆ ನಿಲ್ದಾಣದಲ್ಲಿ ಬೋಗಿಯೊಳಗೆಯೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಮೈಸೂರು ಸವಣೂರು ನಿವಾಸಿ ಪೊನ್ನಮ್ಮ ಅವರು ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆಯಾಗಿದ್ದಾರೆ. ಅವರು ಮಂಗಳೂರಿನಲ್ಲಿ ರೈಲು ಹತ್ತಿದ್ದು ಸ್ವಲ್ಪ ಮುಂದೆ ಬರುವ ವೇಳೆಗೆ ಇವರಿಗೆ ಹೆರಿಗೆಯ ನೋವು ಬಂದಿದ್ದು, ಬೆಂಗಳೂರಿಗೆ ತೆರಳುತ್ತಿದ್ದ ಮುಸ್ಲಿಂ ಸಮುದಾಯದ ಮಹಿಳೆಯರು ಉಪಚರಿಸಿದ್ದಲ್ಲದೆ, ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ರೈಲ್ವೆ ಇಲಾಖೆ ತಕ್ಷಣ ಸ್ಪಂದಿಸಿ ಬಿ.ಸಿ. ರೋಡಿನ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿ, ಸ್ಥಳೀಯ ಸೋಮಯಾಜಿ ಆಸ್ಪತ್ರೆಯ ವೈದ್ಯರ ತಂಡವನ್ನು ಕರೆಸಿಕೊಂಡು ರೈಲು ಬೋಗಿಯೊಳಗೆ ಹೆರಿಗೆಗಾಗಿ ವ್ಯವಸ್ಥೆ ಮಾಡಿಕೊಟ್ಟಿದ್ದಲ್ಲದೆ, ವೈದ್ಯರ ತಂಡ ಯಶಸ್ವಿಯಾಗಿ ಹೆರಿಗೆಯನ್ನು ಮಾಡಿಸಿದೆ. ಕೂಡಲೇ ಅಂಬ್ಯಲೆನ್ಸ್ ಮೂಲಕ ಮಗು ಹಾಗೂ ತಾಯಿಯನ್ನು ವೈದ್ಯರ ತಂಡ ಬಿ.ಸಿ. ರೋಡಿನ ಸೋಮಯಾಜಿ‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಿ, ಇಬ್ಬರಿಗೂ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.