ಚೆನ್ನೈ: ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಬಹುಮತದ ಕೊರತೆಯಿದ್ದರೂ, ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ ಎಂದು ವರದಿಗಳು ತಿಳಿಸಿವೆ. ತಮಿಳುನಾಡಿನ ರಾಜಕೀಯದಲ್ಲಿ ದಳಪತಿ ವಿಜಯ್ ಯುಗ ಆರಂಭವಾಗಿದೆ. ಮೊದಲ ಪ್ರಯತ್ನದಲ್ಲೇ ನಟ ವಿಜಯ್ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿರುವುದು ಗಮನಾರ್ಹ ಸಂಗತಿ. ಚೊಚ್ಚಲ ಚುನಾವಣೆಯಲ್ಲೇ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಟಿವಿಕೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಬಹುಮತಕ್ಕೆ 118 ಸ್ಥಾನಗಳು ಬೇಕಿದ್ದು, 10 ಸ್ಥಾನಗಳ ಕೊರತೆಯಿದೆ. ಹೀಗಿದ್ದರೂ ಟಿವಿಕೆ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದು, ಮೈತ್ರಿ ಕುರಿತ ಚರ್ಚೆಗಳು ನಡೆಯುತ್ತಿದೆ ಎನ್ನಲಾಗಿದೆ.
ಟಿವಿಕೆ ಮುಖ್ಯಸ್ಥ ವಿಜಯ್, ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರಿಗೆ ಪತ್ರ ಬರೆದು ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸಲು ರಾಜ್ಯಪಾಲರನ್ನು ಆಹ್ವಾನಿಸುವಂತೆ ರಾಜಭವನಕ್ಕೆ ಮನವಿ ಮಾಡಿದ್ದಾರೆ. ಜೊತೆಗೆ 2 ವಾರಗಳಲ್ಲಿ ಬಹುಮತ ಸಾಬೀತುಪಡಿಸುವುದಾಗಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಮಾತುಕತೆ ನಡೆಸಲು ಎಲ್ಲ ವಿಜೇತ ಅಭ್ಯರ್ಥಿಗಳನ್ನು ಟಿವಿಕೆ ಪಕ್ಷದ ಕಚೇರಿಗೆ ವಿಜಯ್ ಆಹ್ವಾನಿಸಿದ್ದಾರೆ.
ಟಿವಿಕೆ ಪಕ್ಷವು ಸರ್ಕಾರ ರಚಿಸಲು ಮೂರು ಸಾಧ್ಯತೆಗಳಿವೆ. ಮೊದಲನೆಯದ್ದಾಗಿ ಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಂಡಿದ್ದ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುವುದು. ಎರಡನೇಯದ್ದಾಗಿ ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿ ಒಡೆದು ಹೊಸ ಒಕ್ಕೂಟದ ರಚಿಸುವುದು ಅಥವಾ ಕನಿಷ್ಠ ಸ್ಥಿರ ಸರ್ಕಾರಕ್ಕಾಗಿ ಎಐಎಡಿಎಂಕೆಯಿಂದ ಬಾಹ್ಯ ಬೆಂಬಲ ಕೇಳುವುದು. ವಿಜಯ್ ಅವರ ಮುಂದಿನ ನಡೆಯಾ ಬಗ್ಗೆ ಎಲ್ಲೆಡೆ ಕುತೂಹಲವಿದೆ.

0 Comments