ಬಂಟ್ವಾಳ: ಕ್ಷಣಮಾತ್ರದ ಅವಘಡ... ಕಣ್ಣೆದುರೇ 40 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದ ಬೈಕ್ ಸವಾರ! ಸಾಮಾನ್ಯವಾಗಿ ಇಂತಹ ಅಪಘಾತದಲ್ಲಿ ಬದುಕುಳಿಯುವುದೇ ಕಷ್ಟ. ಆದರೆ ಅದೃಷ್ಟವೋ, ರೈಡಿಂಗ್ ಗೇರ್‌ನ ರಕ್ಷಣೆಯೋ ಸವಾರ ಮಾತ್ರ ಪ್ರಾಣಾಪಾಯದಿಂದ ಪಾರಾಗಿದ್ದಾನೆ!
ಬಿ.ಸಿ.ರೋಡ್ ಫ್ಲೈಓವರ್‌ನಲ್ಲಿ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಭೀಕರ ಡಿಕ್ಕಿಯ ಪರಿಣಾಮ ಆರ್ವಿನ್ ಅತ್ತಾವರ ಎಂಬ ಸವಾರ ಮೇಲ್ಸೇತುವೆಯಿಂದ ನೇರವಾಗಿ ಕೆಳಗಿನ ಸರ್ವೀಸ್ ರಸ್ತೆಗೆ ಎಸೆಯಲ್ಪಟ್ಟಿದ್ದಾನೆ. ಸುಮಾರು 40 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದರೂ ಆತನಿಗೆ ಗಂಭೀರ ಗಾಯಗಳಾಗಿಲ್ಲ ಎನ್ನಲಾಗಿದೆ.
ಘಟನೆಯ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಈ ದೃಶ್ಯ ನೋಡುಗರನ್ನು ಬೆಚ್ಚಿಬೀಳಿಸುವಂತಿದೆ. ಸರ್ವೀಸ್ ರಸ್ತೆಯಲ್ಲಿ ಆ ಕ್ಷಣದಲ್ಲಿ ಯಾವುದೇ ವಾಹನಗಳು ಸಂಚರಿಸದಿದ್ದುದೇ ಮತ್ತೊಂದು ದೊಡ್ಡ ಅನಾಹುತ ತಪ್ಪಲು ಕಾರಣವಾಗಿದೆ. ರಸ್ತೆಯ ಬದಿಯಲ್ಲಿದ್ದ ಜನರು ಏಕಾಏಕಿ ಮೇಲಿನಿಂದ ಬಿದ್ದ ಸವಾರನನ್ನು ಕಂಡು ಬೆಚ್ಚಿಬಿದ್ದರೂ, ತಕ್ಷಣವೇ ನೆರವಿಗೆ ಧಾವಿಸಿದ್ದಾರೆ.
ಹಾಸನಕ್ಕೆ ಸ್ನೇಹಿತೆಯನ್ನು ಕರೆದುಕೊಂಡು ಬರಲು ಬುಲೆಟ್ ಬೈಕ್‌ನಲ್ಲಿ ತೆರಳಿದ್ದ ಆರ್ವಿನ್, ವಾಪಸ್ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಆತನ ಸ್ನೇಹಿತೆಯೂ ಪ್ರತ್ಯೇಕ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಆರ್ವಿನ್ ಧರಿಸಿದ್ದ ರೈಡಿಂಗ್ ಗೇರ್ ಹೆಚ್ಚಿನ ಗಾಯಗಳಿಂದ ರಕ್ಷಿಸಿದೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 Comments