ಕಾಸರಗೋಡು: ವಿಶ್ವ ಉರ್ದು ದಿನಾಚರಣೆಯ ಅಂಗವಾಗಿ ತೆಹರೀಕ್ ಎ ಉರ್ದು ಕೇರಳ ರಾಜ್ಯ ಸಮಿತಿ ಹಾಗೂ ಸರ್ಕಾರಿ ಕಾಲೇಜು ಕಾಸರಗೋಡಿನ ಅರೇಬಿಕ್ ವಿಭಾಗದ ಸಹಯೋಗದಲ್ಲಿ ಕಾಲೇಜಿನ ಸೆಮಿನಾರ್ ಸಭಾಂಗಣದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ನಡೆಯಿತು. ಅಲ್ಲಾಮಾ ಮುಹಮ್ಮದ್ ಇಕ್ಬಾಲ್ ಅವರ ಜನ್ಮದಿನವಾದ ನವೆಂಬರ್ 9ರಂದು ವಿಶ್ವ ಉರ್ದು ದಿನವನ್ನು ಆಚರಿಸಲಾಗುತ್ತದೆ.
ಎ.ಕೆ.ಎಂ. ಅಶ್ರಫ್ ಶಾಸಕರು ಕಾರ್ಯಕ್ರಮ ಉದ್ಘಾಟಿಸಿದರು. ಭಾಷೆಗಳು ಮನುಷ್ಯರನ್ನು ವಿಭಜಿಸುವುದಕ್ಕಲ್ಲ, ಒಗ್ಗೂಡಿಸುವುದಕ್ಕೆ ಇವೆ. ಭಾರತದ ಬಹುಸಂಸ್ಕೃತಿಯ ಬೆಳವಣಿಗೆಯಲ್ಲಿ ಉರ್ದು ಭಾಷೆಗೆ ಮಹತ್ವದ ಸ್ಥಾನವಿದೆ ಎಂದು ಅವರು ಹೇಳಿದರು. ಜನರಲ್ಲಿ ಸ್ವಾತಂತ್ರ್ಯ ಪ್ರಜ್ಞೆ ಬೆಳೆಸುವಲ್ಲಿ ಹಾಗೂ ವಸಾಹತುಶಾಹಿ ಆಡಳಿತದ ವಿರುದ್ಧದ ಹೋರಾಟಗಳಿಗೆ ಬಲ ತುಂಬುವಲ್ಲಿ ಉರ್ದು ಕವಿತೆಗಳು ಮತ್ತು ಸಾಹಿತ್ಯ ಕೃತಿಗಳು ಮಹತ್ವದ ಪಾತ್ರ ವಹಿಸಿವೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ವಿ.ಎಸ್. ಅನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಕೇರಳ ಉರ್ದು ಟೀಚರ್ಸ್ ಅಸೋಸಿಯೇಷನ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಸಲಾಂ ಮಲಯಮ್ಮ ಮುಖ್ಯ ಭಾಷಣ ಮಾಡಿದರು. ತೆಹರೀಕ್ ಎ ಉರ್ದು ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಅಸೀಮ್ ಮಣಿಮುಂಡ ವಿಷಯ ಮಂಡಿಸಿದರು.
ತೆಹರೀಕ್ ಎ ಉರ್ದು ಕೇರಳ ರಾಜ್ಯಾಧ್ಯಕ್ಷ ಪಿ.ಕೆ.ಸಿ. ಮೊಹಮ್ಮದ್, ಡಾ. ಕೆ.ಕೆ. ಸೈನಲ್ ಆಬಿದ್, ಟಿ. ಅಜೀಸ್, ಎಸ್. ಸುಜಾತ, ಮೊಹಮ್ಮದ್ ಶಾಹಿಲ್ ಖಾನ್, ಡಾ. ಕೆ. ಮೊಹಮ್ಮದಲಿ, ಎಂ.ಪಿ. ಅಬ್ದುರಹ್ಮಾನ್, ದೇವಿಕಾ ಪಣಿಕ್ಕರ್, ಶ್ರೀಕಲಾ, ಇಸ್ಮಾಯಿಲ್ ಅಬೂಬಕ್ಕರ್, ಡಾ. ದಿವ್ಯ, ಒ.ಕೆ. ಶರಣ್ಯ, ಅಬ್ದುಲ್ ಹಕೀಂ ಫೈಝಿ, ಮಾಹಿನ್ ಮಾಸ್ಟರ್, ಶುಕೂರ್ ಹಾಗೂ ಶರೀಫ್ ಕಾಸರಗೋಡು ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

0 Comments