ಬೇಳ : ಹಿಂದೂ ಜಾಗರಣ ವೇದಿಕೆ ಛತ್ರಪತಿ ನಗರ, ದರ್ಬೆತ್ತಡ್ಕ ಇದರ ವತಿಯಿಂದ ದೀಪಾವಳಿ ಬಲಿಪಾಡ್ಯಮಿಯ ಪವಿತ್ರ ಸಂದರ್ಭದಲ್ಲಿ ಗೋ ಸಂರಕ್ಷಣಾ ಸಂಕಲ್ಪ ಮತ್ತು ಮಹಾ ಗೋಪೂಜಾ ಉತ್ಸವವನ್ನು ನವೆಂಬರ್ 10ರ ಮಂಗಳವಾರ (ಇಂದು) ಸಂಜೆ 5 ಗಂಟೆಗೆ ಛತ್ರಪತಿ ನಗರ ದರ್ಬೆತ್ತಡ್ಕದಲ್ಲಿ ಆಯೋಜಿಸಲಾಗಿದೆ.
ಸನಾತನ ಧರ್ಮದಲ್ಲಿ ಗೋಮಾತೆಗೆ ವಿಶೇಷ ಪವಿತ್ರ ಸ್ಥಾನವಿದ್ದು, ಗೋ ಸಂರಕ್ಷಣೆ ಹಾಗೂ ಸಾಂಪ್ರದಾಯಿಕ ಸಂಸ್ಕೃತಿಯ ಜಾಗೃತಿಯ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಂಗವಾಗಿ ಸಂಜೆ 5.15ಕ್ಕೆ ಗೋಮಾತೆಗೆ ಧೂಪ, ದೀಪ, ಪುಷ್ಪಾರ್ಚನೆ ಹಾಗೂ ಅಲಂಕಾರ, 5.30ಕ್ಕೆ ಗೋ ಪೂಜೆ ಮತ್ತು ಮಂತ್ರಾಕ್ಷತೆ, ಸಂಜೆ 6 ಗಂಟೆಗೆ ಗೋ ಸಂರಕ್ಷಣೆ ಮತ್ತು ಹಿಂದೂ ಧರ್ಮದ ಕುರಿತು ಜಾಗೃತಿ ಭಾಷಣ ನಡೆಯಲಿದೆ. ಸಂಜೆ 7 ಗಂಟೆಗೆ ಮಹಾಮಂಗಳಾರತಿ ಜರುಗಲಿದೆ.
ಶ್ರೀರಾಮಕೃಷ್ಣ ಹೆಬ್ಬಾರ್ ಸೀತಾಂಗೋಳಿ ಅಧ್ಯಕ್ಷತೆ ವಹಿಸಲಿದ್ದು, ಶ್ರೀಧಾಮ ಮಾಣಿಲದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ವಿಶ್ವ ಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಧರ್ಮಾಚಾರ್ಯ ಪ್ರಮುಖ್ ಡಾ. ಗಣೇಶ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಗೌರವ ಉಪಸ್ಥಿತರಾಗಿ ಕಾಸರಗೋಡು ಜಿಲ್ಲಾ ಪ್ರಚಾರ ಪ್ರಮುಖ್ ಬಾಲಕೃಷ್ಣ ಏಣಿಯರ್ಪು ಹಾಗೂ ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಡಿ. ಶಂಕರ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗೋಮಾತೆಯ ಪೂಜೆ ಹಾಗೂ ಗೋ ಸಂರಕ್ಷಣಾ ಸಂಕಲ್ಪದಲ್ಲಿ ಕೈಜೋಡಿಸಬೇಕೆಂದು ಹಿಂದೂ ಜಾಗರಣ ವೇದಿಕೆ ಛತ್ರಪತಿ ನಗರ, ದರ್ಬೆತ್ತಡ್ಕದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

0 Comments