ಕಾಸರಗೋಡು: ಪಿಲಿಕ್ಕೋಡ್ ಮಡಿವಯಲ್‌ನಲ್ಲಿ 67 ವರ್ಷದ ಪತ್ತನಾತ್ ಕುಞಂಬು ಅವರನ್ನು ಮನೆಯೊಳಗೆ ಉಸಿರುಗಟ್ಟಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ಪತ್ನಿ ಹಾಗೂ ಸಂಬಂಧಿಕನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿದೆ. ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ-II ಈ ತೀರ್ಪು ನೀಡಿದೆ.
ಪ್ರಕರಣದ ಮೊದಲ ಆರೋಪಿ ಹಾಗೂ ಮೃತ ಕುಞಂಬು ಅವರ ಪತ್ನಿ ಜಾನಕಿ ಅಲಿಯಾಸ್ ವೆಂಬಿರಿಚ್ಚಿ ಜಾನಕಿ (55) ಮತ್ತು ಎರಡನೇ ಆರೋಪಿ ರಾಜೇಶ್ ಅಲಿಯಾಸ್ ಉಂಡ ರಾಜೇಶ್ (40) ಶಿಕ್ಷೆಗೊಳಗಾದವರು. ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ರಾಮು ರಮೇಶ್ ಚಂದ್ರಭಾನು ಶಿಕ್ಷೆ ಪ್ರಕಟಿಸಿದ್ದಾರೆ. ಇಬ್ಬರೂ ತಲಾ 2 ಲಕ್ಷ ರೂ. ದಂಡ ಪಾವತಿಸಬೇಕು. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ ನಾಲ್ಕು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕು. ಅಲ್ಲದೆ, ಐಪಿಸಿ ಸೆಕ್ಷನ್ 449ರ ಅಡಿಯಲ್ಲಿ ಎರಡನೇ ಆರೋಪಿ ರಾಜೇಶ್‌ಗೆ ಹೆಚ್ಚುವರಿಯಾಗಿ 10 ವರ್ಷಗಳ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಲಾಗಿದೆ. ಪ್ರಕರಣದ ಮೂರನೇ ಆರೋಪಿ ಅನಿಲ್ ಅಲಿಯಾಸ್ ಅನಿಮಾಮನ್ ವಿಚಾರಣೆ ನಡೆಯುತ್ತಿದ್ದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದ.
2021ರ ಜುಲೈ 21ರಂದು ರಾತ್ರಿ 10 ಗಂಟೆ ಸುಮಾರಿಗೆ ಘಟನೆ ನಡೆದಿತ್ತು. ಕೋವಿಡ್ ಸೋಂಕಿನ ಬಳಿಕ ದೇಹದ ಒಂದು ಭಾಗದ ಸ್ವಾಧೀನ ಕಳೆದುಕೊಂಡು ದೈಹಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕುಂಜಂಬು ಮನೆಯ ಹಾಲ್‌ನಲ್ಲಿದ್ದ ಹಾಸಿಗೆಯ ಮೇಲೆ ಮಲಗಿದ್ದರು. ಅವರನ್ನು ಆರೈಕೆ ಮಾಡುತ್ತಿದ್ದ ಪತ್ನಿ ಜಾನಕಿಗೆ ಉಂಟಾಗಿದ್ದ ತೊಂದರೆಗಳು ಹಾಗೂ ಪತಿಯೊಂದಿಗಿನ ನಿರಂತರ ಭಿನ್ನಾಭಿಪ್ರಾಯಗಳು ಕೊಲೆಗೆ ಕಾರಣವಾಗಿದ್ದವು ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು. ಜಾನಕಿಯ ಸೂಚನೆಯಂತೆ ಆಕೆಯ ಸಮ್ಮುಖದಲ್ಲೇ ಎರಡನೇ ಆರೋಪಿ ರಾಜೇಶ್ ಮತ್ತು ಮೂರನೇ ಆರೋಪಿ ಅನಿಲ್ ಸೇರಿ ಕುಞಂಬು ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.
ಮೃತರ ಸಂಬಂಧಿಕ ಪ್ರಮೋದ್ ನೀಡಿದ ದೂರಿನ ಮೇರೆಗೆ ಚಂದೇರ ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಪ್ರಕರಣದ ತನಿಖೆಯಲ್ಲಿ ಇದು ಕೊಲೆ ಎಂಬುದು ಬೆಳಕಿಗೆ ಬಂದಿತ್ತು. ಅಂದಿನ ಚಂದೇರ ಉಪನಿರೀಕ್ಷಕ ಹಾಗೂ ಪ್ರಸ್ತುತ ಕಾಸರಗೋಡು ವಿಜಿಲೆನ್ಸ್ ಇನ್‌ಸ್ಪೆಕ್ಟರ್ ಶ್ರೀದಾಸ್ ಎಂ.ವಿ. ಅವರು ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿದ್ದರು. ಪ್ರಕರಣದ ಮುಂದಿನ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದು, ಅಂದಿನ ಚಂದೇರ ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ಪ್ರಸ್ತುತ ಕಣ್ಣೂರು ಕ್ರೈಂ ಬ್ರಾಂಚ್ ಡಿವೈಎಸ್‌ಪಿ ಪಿ. ನಾರಾಯಣನ್.
ವಿಚಾರಣೆ ವೇಳೆ ಪ್ರಾಸಿಕ್ಯೂಷನ್ 10 ಸಾಂದರ್ಭಿಕ ವಸ್ತುಗಳು ಹಾಗೂ 58 ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಒಟ್ಟು 30 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು. ಸಾಕ್ಷಿಗಳ ಹೇಳಿಕೆ ಮತ್ತು ಸಾಂದರ್ಭಿಕ ಪುರಾವೆಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯ ಆರೋಪಿಗಳು ತಪ್ಪಿತಸ್ಥರೆಂದು ನಿರ್ಧರಿಸಿ ಶಿಕ್ಷೆ ವಿಧಿಸಿದೆ. ಪ್ರಾಸಿಕ್ಯೂಷನ್ ಪರ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಚಂದ್ರಮೋಹನನ್ ಜಿ. ಹಾಜರಾಗಿದ್ದರು.

0 Comments