ಕಾಸರಗೋಡು: ಕಾಸರಗೋಡು ಕಂದಾಯ ಜಿಲ್ಲಾ ವಿಜ್ಞಾನೋತ್ಸವ ಹಾಗೂ ಪಯ್ಯನ್ನೂರು ವಲಯದ ವೃತ್ತಿಪರ ಉನ್ನತ ಮಾಧ್ಯಮಿಕ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ 'ಸ್ಕಿಲ್ ಫೆಸ್ಟ್' ನಯನ್ಮಾರ್ಮೂಲ ತನ್ಬೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಿನ್ನೆ (ನ.9) ಆರಂಭಗೊಂಡಿತು. ವಿಜ್ಞಾನೋತ್ಸವವನ್ನು ಆರೋಗ್ಯ ಮತ್ತು ದೇವಸ್ವಂ ಖಾತೆ ಸಚಿವ ಕೆ. ಮುರಳೀಧರನ್ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಸರಗೋಡು ಶಾಸಕ ಕಲ್ಲಟ್ರ ಮಾಹಿನ್ ವಹಿಸಿದ್ದರು.
ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಆಸಕ್ತಿ ಮತ್ತು ಸೃಜನಶೀಲತೆಯನ್ನು ಬೆಳೆಸುವುದರ ಜತೆಗೆ ಅವರ ನವೀನ ಆಲೋಚನೆಗಳು ಹಾಗೂ ಪ್ರಾಯೋಗಿಕ ಕೌಶಲ್ಯಗಳನ್ನು ಪ್ರದರ್ಶಿಸಲು ವಿಜ್ಞಾನೋತ್ಸವ ಉತ್ತಮ ವೇದಿಕೆಯಾಗಿದೆ ಎಂದು ಸಚಿವ ಕೆ. ಮುರಳೀಧರನ್ ಹೇಳಿದರು. ಬಳಿಕ ಆರೋಗ್ಯ ಸಚಿವರು ಮಕ್ಕಳೊಂದಿಗೆ ಸಂವಾದ ನಡೆಸಿದರು.
ಮೇಳದ ಲೋಗೋ ವಿನ್ಯಾಸಕರಿಗೆ ಸ್ಮರಣಿಕೆ ನೀಡುವ ಕಾರ್ಯಕ್ರಮವನ್ನು ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ನೆರವೇರಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಸಂಘಟನಾ ಸಮಿತಿ ಪ್ರಧಾನ ಸಂಚಾಲಕಿ ಹಾಗೂ ಡಿಡಿಇ ಉಸ್ತುವಾರಿ ಸವಿತಾ ಪಿ., ಜಿಲ್ಲಾ ಪಂಚಾಯತ್ ಸದಸ್ಯ ಪಿ.ಬಿ. ಶಫೀಕ್, ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿ.ಎ. ಅಬ್ದುಲ್ಲ ಕುಂಞಿ, ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತನ್ ಅಜಕ್ಕೋಡ್, ಸದಸ್ಯ ಎ.ಎ. ಶಿಹಾಬುದ್ದೀನ್, ಪಯ್ಯನ್ನೂರು ವಲಯ ವಿಎಚ್ಎಸ್ಇ ಸಹಾಯಕ ನಿರ್ದೇಶಕಿ ಇ.ಆರ್. ಉದಯಕುಮಾರಿ, ಕೈಟ್ ಜಿಲ್ಲಾ ಸಂಯೋಜಕ ರೋಜಿ ಜೋಸೆಫ್, ಕಾಸರಗೋಡು ಡಿಪಿಸಿ ಶೌಕತ್ತಲಿ ಅಕ್ಕಳತ್, ಡಿಇಒ ರಾಹುಲ್ ಎ. ರಾಜ್, ಎ.ಎಂ. ಶಶಿಧರ, ಶಾಲಾ ವ್ಯವಸ್ಥಾಪಕ ಎಂ. ಅಬ್ದುಲ್ಲ ಹಾಜಿ, ಪಿಟಿಎ ಅಧ್ಯಕ್ಷ ಎಂ.ಎ. ಅಬ್ದುಲ್ ರಫೀಕ್, ಮುಖ್ಯಶಿಕ್ಷಕ ಪಿ.ಕೆ. ಅನಿಲ್ ಕುಮಾರ್ ಹಾಗೂ ಇಸ್ಮಾಯಿಲ್ ಮಾನ್ಯ ಉಪಸ್ಥಿತರಿದ್ದರು. ಡಿಡಿಇ ಉಸ್ತುವಾರಿ ಪಿ. ಸವಿತಾ ಸ್ವಾಗತಿಸಿದರು. ಎನ್.ಎ. ಆಸಿಫ್ ವಂದಿಸಿದರು.
ಎರಡು ದಿನಗಳ ಕಾಲ ನಡೆಯುವ ವಿಜ್ಞಾನೋತ್ಸವದಲ್ಲಿ ಕಾಸರಗೋಡು ಕಂದಾಯ ಜಿಲ್ಲೆಯ ಏಳು ಉಪಜಿಲ್ಲೆಗಳಿಂದ ಸುಮಾರು 3,500 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ವಿವಿಧ ವಿಜ್ಞಾನ ಪ್ರಯೋಗಗಳು ಹಾಗೂ ಯೋಜನೆಗಳ ಪ್ರದರ್ಶನವೂ ಮೇಳದಲ್ಲಿ ಏರ್ಪಡಿಸಲಾಗಿದೆ. ಶಾಸ್ತ್ರೋತ್ಸವದಲ್ಲಿ 70 ವಿಭಾಗಗಳಲ್ಲಿ 836 ವಿದ್ಯಾರ್ಥಿಗಳು ಸ್ಪರ್ಧಿಸಲಿದ್ದಾರೆ. ವಿಎಚ್ಎಸ್ಇ ಉತ್ಸವದ 18 ವಿಭಾಗಗಳಲ್ಲಿ 310 ವಿದ್ಯಾರ್ಥಿಗಳು ಇಂದು ಸ್ಪರ್ಧಾ ಕಣದಲ್ಲಿರಲಿದ್ದಾರೆ. ಐಟಿ ಮೇಳವು ಎರಡು ಹಂತಗಳಲ್ಲಿ ನಾಲ್ಕು ಐಟಿ ಪ್ರಯೋಗಾಲಯಗಳಲ್ಲಿ ನಡೆಯಲಿದ್ದು, 10 ವಿಭಾಗಗಳಲ್ಲಿ 27 ವಿದ್ಯಾರ್ಥಿಗಳು ಸ್ಪರ್ಧಿಸಲಿದ್ದಾರೆ. ವಿಎಚ್ಎಸ್ಇ ಸ್ಕಿಲ್ ಫೆಸ್ಟ್ ಬಿ ಮತ್ತು ಸಿ ಬ್ಲಾಕ್ಗಳ 18 ತರಗತಿ ಕೊಠಡಿಗಳಲ್ಲಿ ನಡೆಯಲಿದೆ.
ಸ್ಪರ್ಧೆಗಳ ಫಲಿತಾಂಶಗಳನ್ನು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಹಾಗೂ ಮೇಳದ ಆವರಣದಲ್ಲಿ ಅಳವಡಿಸಿರುವ ಡಿಜಿಟಲ್ ಪರದೆಗಳ ಮೂಲಕ ತಕ್ಷಣ ತಿಳಿದುಕೊಳ್ಳಬಹುದು. ಫಲಿತಾಂಶಗಳನ್ನು ಮಲಯಾಳಂ ಮಾತ್ರವಲ್ಲದೆ ಕನ್ನಡದಲ್ಲಿಯೂ ಪ್ರದರ್ಶಿಸಲಾಗುವುದು.
ಮಾಧ್ಯಮ ಪೆವಿಲಿಯನ್ ಮತ್ತು ಮಾಧ್ಯಮ ಫೋಟೋ ಪಾಯಿಂಟ್ ವ್ಯವಸ್ಥೆ ಮಾಡಲಾಗಿದೆ. ವಿಜ್ಞಾನೋತ್ಸವದ ವರದಿಗಾರಿಕೆಗೆ ವಿಶೇಷ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ.
ವಿಜ್ಞಾನೋತ್ಸವದ ಆವರಣದಲ್ಲಿ ಹಸಿರು ಪ್ರೋಟೋಕಾಲ್ ಸಮಿತಿ, ಸ್ವಚ್ಛತಾ ಮಿಷನ್ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳ ಸಹಯೋಗದಲ್ಲಿ ಪ್ರವೇಶ ದ್ವಾರ ನಿರ್ಮಿಸಲಾಗಿದೆ. ಬಳಕೆಗೆ ಬಾರದ ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡಿ ಈ ದ್ವಾರವನ್ನು ಸಿದ್ಧಪಡಿಸಲಾಗಿದೆ.
ಇಂದು ವಿಜ್ಞಾನ, ಗಣಿತ ಮತ್ತು ಸಮಾಜ ವಿಜ್ಞಾನ ಮೇಳ ನಡೆಯಲಿದೆ. ಇದರೊಂದಿಗೆ ಕಾಸರಗೋಡು-ಕಣ್ಣೂರು ವಿಎಚ್ಎಸ್ಇ ಉತ್ಸವವೂ ಮುಂದುವರಿಯಲಿದೆ.




0 Comments