ಬದಿಯಡ್ಕ: ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಚಿವರು, ಜಿಲ್ಲಾಧಿಕಾರಿ ಸಹಿತ ವಂದೇ ಮಾತರಂನ್ನು ಅವಮಾನಿಸಿದ ಪ್ರಕರಣವನ್ನು ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಲುಮೂಲೆ ತೀವ್ರವಾಗಿ ಖಂಡಿಸಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲರಿಗೂ ಪ್ರೇರಣೆಯಾಗಿದ್ದ ರಾಷ್ಟ್ರಗೀತೆ ವಂದೇ ಮಾತರಂನ್ನು ಕಾಂಗ್ರೆಸ್ ಸಚಿವ ವಿ.ಮುರಳೀಧರನ್ ಸಾರ್ವಜನಿಕವಾಗಿ ಅವಮಾನಿಸಿದ್ದಾರೆ. ಜತೆಗೆ ಜಿಲ್ಲೆಯ ಪ್ರಥಮ ಪ್ರಜೆ ಜಿಲ್ಲಾಧಿಕಾರಿ, ಮುಸ್ಲಿಂ ಲೀಗ್ ಶಾಸಕ ಕಲ್ಲಟ್ರ ಮಾಹಿನ್ ಎಂಬಿವರೂ ವಂದೇ ಮಾತರಂ ವನ್ನು ಅವಮಾನಿಸಲು ಶಾಸಕರ ಜತೆಗೂಡಿದ್ದಾರೆ. ಇದು ಖಂಡನೀಯವಾಗಿದೆ. ಆರೋಗ್ಯ ಸಚಿವರು, ಜಿಲ್ಲಾಧಿಕಾರಿಗಳು, ಶಾಸಕರು ಸಾರ್ವಜನಿಕರ ಕ್ಷಮೆ ಕೇಳಬೇಕು ಎಂದವರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಆದೂರು ಪೊಲೀಸರಿಗೆ ದೂರು ನೀಡಲಾಗಿದೆ ಎಂದವರು ತಿಳಿಸಿದ್ದಾರೆ. ಮುಳ್ಳೇರಿಯದಲ್ಲಿ ನಡೆದ ಕಾರ್ಯಕ್ರಮವೊಂದರ ಆರಂಭದಲ್ಲಿ ವಂದೇ ಮಾತರಂ ಹಾಡುವ ವೇಳೆ ಕುಳಿತು ಅವಮಾನಿಸಲಾಗಿದೆ. ಈ ಘಟನೆಯನ್ನು ಸಾರ್ವಜನಿಕರು ಸಹ ತೀವ್ರವಾಗಿ ಖಂಡಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಂದೇ ಮಾತರಂ ಗೀತೆಯನ್ನು ಇಂದು ಕಾಂಗ್ರೆಸ್ ಪಕ್ಷವೇ ಅವಮಾನಿಸಲು ಹೊರಟಿರುವುದು ಖಂಡನೀಯ ಎಂದು ಗೋಪಾಲಕೃಷ್ಣ ಎಂ.ಹೇಳಿಕೆಯಲ್ಲಿ ತಿಳಿಸಿದ್ದಾರೆ.

0 Comments