ಬೆಳ್ಳೂರು: ಸ್ಥಳೀಯಾಡಳಿತ ಚುನಾವಣೆಯಲ್ಲಿ ಬೆಳ್ಳೂರು ಗ್ರಾಪಂ 5ನೇ ವಾರ್ಡ್ ಕಾಯರ್ ಪದವಿನಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿ, ಪಂಚಾಯಿತಿ ಉಪಾಧ್ಯಕ್ಷೆ, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆಯಾಗಿದ್ದ ಗೀತಾ ಕೆ. 183 ಮತಗಳ ಅಂತರದಿಂದ ಗೆಲುವು ಸಾಧಿಸಿ ವಿಜಯ ಗೀತೆ ಹಾಡಿದ್ದಾರೆ. ಈ ವಾರ್ಡ್ ನಲ್ಲಿ ಒಟ್ಟು 434 ಮತಗಳು ಲಭಿಸಿ ಭರ್ಜರಿ ಗೆಲುವಿನ ಪತಾಕೆ ಹಾರಿಸಿದರು.
ಬೆಳ್ಳೂರು ಪಂಚಾಯಿತಿಯಲ್ಲಿ ಬಿಜೆಪಿ 6, ಸಿಪಿಎಂ 4, ಕಾಂಗ್ರೆಸ್ 2, ಸ್ವತಂತ್ರ 2 ವಾರ್ಡ್ ಗಳಲ್ಲಿ ಜಯಗಳಿಸಿದೆ. ಪಂಚಾಯಿತಿಯ 1ನೇ ವಾರ್ಡ್ ಈಂದುಮೂಲೆಯಲ್ಲಿ ಪಂಚಾಯಿತಿಯ ಹಾಲಿ ಅಧ್ಯಕ್ಷ, ಬಿಜೆಪಿ ಅಭ್ಯರ್ಥಿ ಶ್ರೀಧರ ಎಂ., 2ನೇ ವಾರ್ಡ್ ಬಜ ಬಿಜೆಪಿಯ ಸತ್ಯವತಿ ರೈ ಎಂ, 3ನೇ ವಾರ್ಡ್ ಕುಳದಪಾರೆಯಲ್ಲಿ ಬಿಜೆಪಿಯ ಸುಕುಮಾರ ಎನ್., 4ನೇ ವಾರ್ಡ್ ಮರದಮೂಲೆಯಲ್ಲಿ ಬಿಜೆಪಿಯ ಭಾಗೀರಥಿ ಎನ್., 6ನೇ ವಾರ್ಡ್ ನೆಟ್ಟಣಿಗೆಯಲ್ಲಿ ಯುಡಿಎಫ್ ನ ಆಶಿಫಾ ಸಿ.ಎಚ್., 7ನೇ ವಾರ್ಡ್ ಪಳ್ಳಪ್ಪಾಡಿಯಲ್ಲಿ ಸಿಪಿಎಂ ನ ಸುಲೇಖಾ, 8ನೇ ವಾರ್ಡ್ ಕಕ್ಕೆಬೆಟ್ಟುವಿನಲ್ಲಿ ಸ್ವತಂತ್ರ ಅಭ್ಯರ್ಥಿ ಪುರುಷೋತ್ತಮ ಸಿ.ವಿ., 9ನೇ ವಾರ್ಡ್ ಬಸ್ತಿಯಲ್ಲಿ ಸಿಪಿಎಂ ನ ಚೈತ್ರ, 10ನೇ ವಾರ್ಡ್ ಬೆಳ್ಳೂರಿನಲ್ಲಿ ಬಿಜೆಪಿಯ ಮಾಲಿನಿ, 11ನೇ ವಾರ್ಡ್ ನಾಟೆಕಲ್ ನಲ್ಲಿ ಸಿಪಿಎಂ ನ ಶ್ರೀಪತಿ ಎಂ., 12ನೇ ವಾರ್ಡ್ ಕಾಯಿಮೂಲೆಯಲ್ಲಿ ಯುಡಿಎಫ್ ನ ಸಿದ್ದಿಕ್, 13ನೇ ವಾರ್ಡ್ ಪನೆಯಾಲದಲ್ಲಿ ಬಿಜೆಪಿ ಅಭ್ಯರ್ಥಿ ಜಯಕುಮಾರ್, 14ನೇ ವಾರ್ಡ್ ಕಿನ್ನಿಂಗಾರಿನಲ್ಲಿ ಸಿಪಿಎಂ ನ ದುರ್ಗಾದೇವಿ ಜಯಗಳಿಸಿದ್ದಾರೆ.
5ನೇ ವಾರ್ಡ್ ಕಾಯರ್ ಪದವಿನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕೊಡೆ ಚಿಹ್ನೆಯಡಿ ನಾಮಪತ್ರ ಸಲ್ಲಿಸಿದ ಗೀತಾ ಅವರನ್ನು ಬಿಜೆಪಿ ಪಕ್ಷದ ಎಲ್ಲಾ ಜವಾಬ್ದಾರಿ ಹಾಗೂ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿತ್ತು.ಒಟ್ಟು 14 ಸದಸ್ಯ ಬಲದ ಪಂಚಾಯತಿನಲ್ಲಿ ಬಿಜೆಪಿಗೆ ಆಡಳಿತ ದೊರೆಯಬೇಕಾದರೆ ಉಚ್ಛಾಟಿತರಾಗಿ ಬಂಡಾಯ ನಿಂತು ಗೆದ್ದ ಗೀತಾ ಅವರ ಬೆಂಬಲ ಅನಿವಾರ್ಯವಾಗಿದೆ.ಅವರ ನಿಲುವು ಪಂ ನಲ್ಲಿ ನಿರ್ಣಾಯಕವಾಗಿದೆ.

0 Comments