ಮಂಜೇಶ್ವರ: ವರ್ಕಾಡಿ ಪರಿಸರದ ಜನಪರ ಸುದ್ದಿಗಳನ್ನು ಹಾಗೂ ಮಾಹಿತಿಗಳನ್ನು ಪತ್ರಿಕಾ ವರದಿಗಾರರಿಗೆ ನೀಡುತ್ತಾ, ಜೀನಸು ವ್ಯಾಪಾರಿಯಾಗಿ ಜನಾನುರಾಗಿಯಾಗಿದ್ದ ವರ್ಕಾಡಿ ಬಳಿಯ ಬೋರ್ಕಳ ನಿವಾಸಿ ವಾಮನ್ ಬೋರ್ಕಳ (56) ಹೃದಯ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದು, ಇಂದು ಅಪರಾಹ್ನ 12.45 ಕ್ಕೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಕಳೆದ 1 ವರ್ಷದಿಂದ ಹೃದಯ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಒಂದು ವಾರದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ದಿವಂಗತರಾದ ಪುಟ್ಟ ಶೆಟ್ಟಿಗಾರ್ - ಗಿರಿಜಾ ದಂಪತಿಗಳ ಪುತ್ರನಾಗಿದ್ದು, ಪತ್ನಿ ಮೀನಾಕ್ಷಿ, ಮಕ್ಕಳಾದ ಪ್ರೀತಿಕಾ, ಕೃತಿಕಾ, ಸಹೋದರ - ಸಹೋದರಿಯರಾದ: ಮಹಾಬಲ ಶೆಟ್ಟಿಗಾರ್ ಬೋರ್ಕಳ, ವಸಂತ್ ಶೆಟ್ಟಿಗಾರ್ ಬೋರ್ಕಳ, ಸರೋಜಿನಿ, ಗೀತಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ವಾಮನ್ ಬೋರ್ಕಳರವರು 1997 ರಿಂದ ಸುಂಕದಕಟ್ಟೆಯ ಬೇಕರಿ ಪಿ.ಸಿ ರಸ್ತೆ ಬಳಿ "ಬೋರ್ಕಳ ಟ್ರೇಡರ್ಸ್" ಎಂಬ ಜೀನಸಿ ಸಾಮಗ್ರಿ ಸಂಸ್ಥೆಯನ್ನು ಹೊಂದಿದ್ದು, ವಿವಿಧ ಪತ್ರಿಕೆಗಳ ವಿತರಕರು ಆಗಿದ್ದರು. ಅಲ್ಲದೇ ಹವ್ಯಾಸಿ ಪತ್ರಕರ್ತರಾಗಿದ್ದು, ಯಕ್ಷಗಾನ ಪ್ರೇಮಿ, ಗೀತಾ ಸಾಹಿತ್ಯ ಸಂಭ್ರಮದ ಪ್ರೋತ್ಸಾಹಕರೂ ಆಗಿದ್ದು, ಯಕ್ಷಗಾನ ಹಾಗೂ ಗೀತಾ ಸಾಹಿತ್ಯ ಸಂಭ್ರಮದ ಹಲವು ಕಾಯಕ್ರಮಗಳ ಪ್ರಾಯೋಜಕತ್ವವನ್ನು ಕೂಡಾ ತಾವೇ ವಹಿಸಿದ್ದರು. ಊರಿನ ಧಾರ್ಮಿಕ, ಸಾಮಾಜಿಕ, ಸಂಸ್ಕೃತಿಕ ಕಾರ್ಯಕ್ರಮಗಳ ವರದಿಗಳನ್ನು ಸ್ವತಃ ತಾವೇ ಬರೆದು ಪತ್ರಕರ್ತ ಮಿತ್ರರಿಗೆ ಹಾಗೂ ವಿವಿಧ ಪತ್ರಿಕೆಗಳಿಗೆ ಕಳುಹಿಸಿ ಕೊಡುತ್ತಿದ್ದರು. ಎಲ್ಲರೊಂದಿಗೆ ಒಡನಾಟ ಹೊಂದಿದ್ದ ವಾಮನ್ ರ ಅಗಲುವಿಕೆ ಸುಂಕದಕಟ್ಟೆ ಹಾಗೂ ಮಜೀರಪಳ್ಳ ಭಾಗದಲ್ಲಿ ಸೂತಕದ ಕರಿ ಛಾಯೆಯನ್ನು ಮೂಡಿಸಿದೆ.


0 Comments