ಕನ್ಯಾಕುಮಾರಿ: 17 ವರ್ಷದ ಅಪ್ರಾಪ್ತ ಬಾಲಕನೊಂದಿಗೆ ಲೈಂಗಿಕ ಸಂಬಂಧ ಹೊಂದಿದ ಆರೋಪದ ಮೇಲೆ ಮೂರು ತಿಂಗಳ ಗರ್ಭಿಣಿಯಾಗಿರುವ 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯ ವಿರುದ್ಧ ಲಿಂಗ ತಟಸ್ಥ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಬಾಲಕನ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಕನ್ಯಾಕುಮಾರಿ ಜಿಲ್ಲೆಯ ಕೊಳಚೆಲ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿಯನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡನೇ ವರ್ಷದ ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ ಯುವತಿಗೆ ಸುಮಾರು ಒಂದು ವರ್ಷದ ಹಿಂದೆ ಇನ್‌ಸ್ಟಾಗ್ರಾಮ್ ಮೂಲಕ ಪೇಂಟರ್ ಆಗಿ ಕೆಲಸ ಮಾಡುತ್ತಿರುವ ಶಾಲೆ ತೊರೆದ 17 ವರ್ಷದ ಬಾಲಕನ ಪರಿಚಯವಾಗಿತ್ತು. ಬಳಿಕ ಇಬ್ಬರ ನಡುವೆ ಪ್ರೇಮ ಸಂಬಂಧ ಬೆಳೆದು ನಿಯಮಿತವಾಗಿ ಭೇಟಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 21ರಂದು ಹೊಟ್ಟೆನೋವಿನ ಹಿನ್ನೆಲೆಯಲ್ಲಿ ಯುವತಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು. ಈ ವೇಳೆ ಅವರು ಮೂರು ತಿಂಗಳ ಗರ್ಭಿಣಿಯಾಗಿರುವುದು ದೃಢಪಟ್ಟಿತ್ತು. ವಿಷಯ ತಿಳಿದ ಬಾಲಕನ ಕುಟುಂಬಸ್ಥರು ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ.
ಪೋಕ್ಸೊ ಕಾಯ್ದೆಯಡಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಅಪ್ರಾಪ್ತರೆಂದು ಪರಿಗಣಿಸಲಾಗುತ್ತದೆ. ಲೈಂಗಿಕ ಚಟುವಟಿಕೆಗೆ ಅಪ್ರಾಪ್ತರು ನೀಡುವ ಒಪ್ಪಿಗೆಗೆ ಕಾನೂನಿನಲ್ಲಿ ಮಾನ್ಯತೆ ಇಲ್ಲ. ಕಾಯ್ದೆಯ ಲಿಂಗ-ತಟಸ್ಥ ನಿಬಂಧನೆಗಳ ಆಧಾರದಲ್ಲಿ ಯುವತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

0 Comments