ಕಾಞಂಗಾಡ್: ಕೆನರಾ ಬ್ಯಾಂಕ್ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವಕನಿಂದ 3.75 ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವಂಚನೆ ಪ್ರಕರಣಗಳ ಆರೋಪಿಯನ್ನು ಹೊಸದುರ್ಗ ಪೊಲೀಸರು ತ್ರಿಶ್ಶೂರಿನಲ್ಲಿ ಬಂಧಿಸಿದ್ದಾರೆ. ಎರ್ನಾಕುಳಂ ಇಡಪ್ಪಳ್ಳಿ ನಿವಾಸಿ ಕಿಶೋರ್ ಶಂಕರ್ (42) ಬಂಧಿತ ಆರೋಪಿ.
2026ರ ನವೆಂಬರ್ 16ರಂದು ಪಳನಿಯಲ್ಲಿ ಪುತುಕೈ ನಿವಾಸಿ ಸಿದ್ಧಾರ್ಥ್ ಎಂಬವರನ್ನು ಪರಿಚಯಿಸಿಕೊಂಡಿದ್ದ ಆರೋಪಿ, ತಾನು ಕಾಸರಗೋಡು ವಿದ್ಯಾನಗರ ಕೆನರಾ ಬ್ಯಾಂಕ್ನ ಎನ್ಆರ್ಐ ವಿಭಾಗದ ಮ್ಯಾನೇಜರ್ ಶ್ರೀರಾಮ್ ಎಂದು ಸುಳ್ಳು ಹೇಳಿ ನಂಬಿಕೆ ಗಳಿಸಿದ್ದನು. ಬಳಿಕ ಬ್ಯಾಂಕ್ನಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ನವೆಂಬರ್ 16ರಿಂದ 23ರವರೆಗೆ ವಿವಿಧ ಹಂತಗಳಲ್ಲಿ ತನ್ನ ಬ್ಯಾಂಕ್ ಖಾತೆಗೆ 3,75,151 ರೂ. ವರ್ಗಾಯಿಸಿಕೊಂಡು ವಂಚಿಸಿದ್ದನು.
ಈ ಕುರಿತು ನವೆಂಬರ್ 25ರಂದು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರಿಗೆ ಆರೋಪಿ ಇದೇ ರೀತಿಯ ಹಲವು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದುಬಂದಿತ್ತು.
ಕಾಞಂಗಾಡ್ ಡಿವೈಎಸ್ಪಿ ಅವರ ವಿಶೇಷ ನಿರ್ದೇಶನದಂತೆ ರಚಿಸಲಾದ ಪೊಲೀಸ್ ತಂಡ ವೈಜ್ಞಾನಿಕ ತನಿಖೆ ನಡೆಸಿ, ಪ್ರಕರಣ ದಾಖಲಾದ 48 ಗಂಟೆಗಳೊಳಗೆ ತ್ರಿಶ್ಶೂರು ಜಿಲ್ಲೆಯ ಪೂಂಕುನ್ನಂನಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ವೆಳ್ಳರಿಕುಂಡ್ ಸರ್ಕಲ್ ಕಚೇರಿಯ ಜಿಎಎಸ್ಐ ರಂಜಿತ್ ಕೆ., ಕಾಸರಗೋಡು ಡಿಎಚ್ಕ್ಯೂ ಸೈಬರ್ ತಜ್ಞ ಜಿಎಎಸ್ಐ ಶಿವಕುಮಾರ್ ಪಳ್ಳಿಯತ್, ಹೊಸದುರ್ಗ ಪೊಲೀಸ್ ಠಾಣೆಯ ಎಸ್ಸಿಪಿಒ ರಾಜೇಶ್ ಕೆ. ಹಾಗೂ ತ್ರಿಶ್ಶೂರು ಸಿಟಿ ಪೊಲೀಸ್ ಕ್ರೈಂ ಸ್ಕ್ವಾಡ್ನ ಎಎಸ್ಐ ಪಳನಿಸ್ವಾಮಿ ಪಿ.ಕೆ. ಮತ್ತು ಶ್ರೀಜಿತ್ ಸಿ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಆರೋಪಿಯ ವಿರುದ್ಧ ಆಲಪ್ಪುಳ ಜಿಲ್ಲೆಯ ಮಾನ್ನಾರ್, ತಿರುವನಂತಪುರದ ಪೇರೂರುಕ್ಕಡ, ಮಲಪ್ಪುರ ಜಿಲ್ಲೆಯ ಎಡಕ್ಕರ, ತ್ರಿಶ್ಶೂರು ವೆಸ್ಟ್ ಹಾಗೂ ಕಾಸರಗೋಡು ವಿದ್ಯಾನಗರ ಪೊಲೀಸ್ ಠಾಣೆಗಳಲ್ಲಿ ಇದೇ ರೀತಿಯ ಐದು ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ಇತರ ವಂಚನೆ ಪ್ರಕರಣಗಳ ಬಗ್ಗೆಯೂ ತನಿಖೆ ಮುಂದುವರಿದಿದೆ. ಹೊಸದುರ್ಗ ಪೊಲೀಸ್ ಠಾಣೆಯ ಎಸ್ಐ ಅಬ್ದುಲ್ ಬಾಸಿತ್ ಪಿ.ಎ. ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.


0 Comments