ಕೇರಳ: ಧರ್ಮದ ಎಲ್ಲೆಗಳನ್ನು ಮೀರಿದ ಸ್ನೇಹ, ಪ್ರೀತಿ ಮತ್ತು ಮಾನವೀಯತೆಗೆ ಸಾಕ್ಷಿಯಾದ ಅಪರೂಪದ ಘಟನೆಯೊಂದು ಕೇರಳದ ಮಲಪ್ಪುರಂ ಜಿಲ್ಲೆಯ ಪೆರಿಂಥಲ್ಮನ್ನದಲ್ಲಿ ನಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆಪ್ತ ಮುಸ್ಲಿಂ ಸ್ನೇಹಿತನ ಪುತ್ರ ಚೇತರಿಸಿಕೊಂಡ ಹಿನ್ನೆಲೆಯಲ್ಲಿ, ಹಿಂದೂ ಗೆಳೆಯನೊಬ್ಬ ತಾನು ಹೊತ್ತಿದ್ದ ಹರಕೆಯನ್ನು ತೀರಿಸಲು ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ.
ಪೆರಿಂಥಲ್ಮನ್ನ ನಿವಾಸಿ ಪ್ರಮೋದ್ ಎಂಬುವವರು ತಮ್ಮ ಸ್ನೇಹಿತನ ಮಗನ ಆರೋಗ್ಯ ಸುಧಾರಿಸಿದ ಹಿನ್ನೆಲೆಯಲ್ಲಿ ಶಬರಿಮಲೆಗೆ ಪಾದಯಾತ್ರೆ ಆರಂಭಿಸಿದ್ದಾರೆ. ವಿಶೇಷವೆಂದರೆ, ಅವರ ಆಪ್ತ ಸ್ನೇಹಿತ ನಜರ್ ಮನು ಅವರೇ ಪ್ರಮೋದ್ ಅವರ ತಲೆಯ ಮೇಲೆ ಪವಿತ್ರ ಇರುಮುಡಿ ಕಟ್ಟು ಇರಿಸಿ ಯಾತ್ರೆಗೆ ಚಾಲನೆ ನೀಡಿದರು. ಈ ದೃಶ್ಯ ಧಾರ್ಮಿಕ ಸೌಹಾರ್ದದ ಸಂದೇಶ ಸಾರಿದೆ.
ಸುಮಾರು ಏಳು ತಿಂಗಳ ಹಿಂದೆ ನಜರ್ ಮನು ಅವರ 20 ವರ್ಷದ ಪುತ್ರ ಹಮ್ದಾನ್ ಪ್ರಯಾಣಿಸುತ್ತಿದ್ದ ಬೈಕ್ಗೆ ಕಾರೊಂದು ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹಮ್ದಾನ್ ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಆರಂಭದಲ್ಲಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಸಂಪೂರ್ಣ ಚೇತರಿಕೆಯ ಬಗ್ಗೆ ವೈದ್ಯರೂ ಭರವಸೆ ನೀಡಿರಲಿಲ್ಲ ಎನ್ನಲಾಗಿದೆ.
ಕಳೆದ 16 ವರ್ಷಗಳಿಂದ ನಜರ್ ಅವರ ಆಪ್ತ ಸ್ನೇಹಿತರಾಗಿರುವ ಪ್ರಮೋದ್, ಗೆಳೆಯನ ಕುಟುಂಬದ ಸಂಕಷ್ಟ ಕಂಡು ಮರುಗಿದ್ದರು. ಹಮ್ದಾನ್ ಗುಣಮುಖನಾಗಲಿ ಎಂದು ಪ್ರಾರ್ಥಿಸಿದ್ದ ಅವರು, ಆತ ಮತ್ತೆ ಚೇತರಿಸಿಕೊಂಡರೆ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಸನ್ನಿಧಿಗೆ ಪಾದಯಾತ್ರೆ ಕೈಗೊಳ್ಳುವುದಾಗಿ ಹರಕೆ ಹೊತ್ತಿದ್ದರು.
ನಿರಂತರ ಚಿಕಿತ್ಸೆ ಹಾಗೂ ಕುಟುಂಬದವರ ಪ್ರಾರ್ಥನೆಯ ಬಳಿಕ ಹಮ್ದಾನ್ ಚೇತರಿಸಿಕೊಂಡಿದ್ದು, ಇದೀಗ ಮತ್ತೆ ನಡೆಯಲು ಆರಂಭಿಸಿದ್ದಾರೆ. ಗೆಳೆಯನ ಪುತ್ರನ ಚೇತರಿಕೆಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಪ್ರಮೋದ್ ತಮ್ಮ ಇತರ ಸ್ನೇಹಿತರೊಂದಿಗೆ ಶಬರಿಮಲೆ ಯಾತ್ರೆ ಆರಂಭಿಸಿದ್ದಾರೆ. ಈ ಅಪರೂಪದ ಸ್ನೇಹ ಮತ್ತು ಧಾರ್ಮಿಕ ಸೌಹಾರ್ದದ ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

.png)
0 Comments