ಬದಿಯಡ್ಕ: ಕನ್ಯಪ್ಪಾಡಿ ಆಶ್ರಯ ಆಶ್ರಮದಲ್ಲಿ ಕಣಚೂರು ಆಸ್ಪತ್ರೆ, ನಾಟೆಕಲ್ಲು, ದೇರಳಕಟ್ಟೆ, ಮಂಗಳೂರು ಇವರ ವತಿಯಿಂದ ಆಯುರ್ವೇದ ವೈದ್ಯಕೀಯ ಶಿಬಿರವು ಇಂದು (ನ.28) ನಡೆಯಿತು. ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಡಿ. ಶಂಕರ ಅವರು ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇಂದಿನ ಜೀವನಶೈಲಿಯಲ್ಲಿ ಆರೋಗ್ಯದ ಕಾಳಜಿ ಅತ್ಯಂತ ಮುಖ್ಯವಾಗಿದ್ದು, ಆಯುರ್ವೇದ ಚಿಕಿತ್ಸಾ ಪದ್ಧತಿಯು ಆರೋಗ್ಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇಂತಹ ವೈದ್ಯಕೀಯ ಶಿಬಿರಗಳು ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಉತ್ತಮ ಆರೋಗ್ಯ ಸೇವೆ ಪಡೆಯಲು ಸಹಕಾರಿಯಾಗಿವೆ ಎಂದು ತಿಳಿಸಿದರು.
ಆಶ್ರಯ ಆಶ್ರಮದ ಟ್ರಸ್ಟಿ ರಮೇಶ್ ಕಳೇರಿ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮಪಂಚಾಯಿತಿ ಸದಸ್ಯ ಶ್ಯಾಮಪ್ರಸಾದ ಸರಳಿ, ಸಾಮಾಜಿಕ ಕಾರ್ಯಕರ್ತ ರಾಜೇಶ್ ಮಾಸ್ತರ್ ಅಗಲ್ಪಾಡಿ, ಸಂಸ್ಕೃತ ಅಧ್ಯಾಪಕ ಮಹೇಶ್ ಕೃಷ್ಣ ತೇಜಸ್ವಿ ಕುಳಮರ್ವ, ಕಣಚೂರು ಆಯುರ್ವೇದ ಆಸ್ಪತ್ರೆಯ ವೈದ್ಯರುಗಳಾದ ಡಾ| ವಿಶ್ರುತ್, ಡಾ| ಅಶ್ವಿನ್, ಡಾ| ಶ್ರೀಲಕ್ಷ್ಮೀ ಶುಭಕೋರಿದರು. ಆಶ್ರಮದ ಹಿರಿಯರು, ಸಾರ್ವಜನಿಕರು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

0 Comments