ಕಾಸರಗೋಡು: ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಪೊಲೀಸರು ನಡೆಸಿದ ತಪಾಸಣೆಯಲ್ಲಿ ಗಾಂಜಾ ಮತ್ತು ಎಂಡಿಎಂಎ ಮಾದಕವಸ್ತುಗಳೊಂದಿಗೆ ಇಬ್ಬರು ಯುವಕರನ್ನು ಬಂಧಿಸಲಾಗಿದೆ.
ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ಮುಳಿಯಾರ್ ಗ್ರಾಮದ ಬಾವಿಕ್ಕರ ಕೆ.ಕೆ.ಪುರಂ ಮಂಚಕ್ಕಲ್ ರಸ್ತೆ ಜಂಕ್ಷನ್‌ನಲ್ಲಿ 5.80 ಗ್ರಾಂ ಗಾಂಜಾದೊಂದಿಗೆ ಯುವಕನನ್ನು ಬಂಧಿಸಲಾಗಿದೆ. 'ಆಪರೇಷನ್ ತೂಫಾನ್' ಕಾರ್ಯಾಚರಣೆಯ ಭಾಗವಾಗಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ ಮೊಂಡಕ್ಕಲ್ ಹೌಸ್ ನಿವಾಸಿ ಅಬ್ದುಲ್ ಸಮದ್ ಎಂ.ಎ. (29) ಎಂಬಾತನನ್ನು ತಡೆದು ತಪಾಸಣೆ ನಡೆಸಿದಾಗ ಮಾರಾಟಕ್ಕಾಗಿ ಸಂಗ್ರಹಿಸಿಟ್ಟಿದ್ದ ಗಾಂಜಾ ಪತ್ತೆಯಾಗಿದೆ. ಈ ಸಂಬಂಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪಳ ಮನ್ನಂಕುಳಿ ಸ್ಟೇಡಿಯಂ ರಸ್ತೆಯ ಸಮೀಪ ಎಂಡಿಎಂಎ ಮತ್ತು ಗಾಂಜಾದೊಂದಿಗೆ ಮತ್ತೊಬ್ಬ ಯುವಕನನ್ನು ಬಂಧಿಸಲಾಗಿದೆ. ಗಸ್ತಿನಲ್ಲಿದ್ದ ಪೊಲೀಸರನ್ನು ಕಂಡು ಓಡಲು ಯತ್ನಿಸಿದ ವೋರ್ಕಾಡಿ ಪಡಿ ಹೌಸ್ ನಿವಾಸಿ ಮೊಹಮ್ಮದ್ ರಾಸಿಕ್ (24) ಎಂಬಾತನನ್ನು ಪೊಲೀಸರು ಬೆನ್ನಟ್ಟಿ ಹಿಡಿದಿದ್ದಾರೆ. ನಂತರ ನಡೆಸಿದ ತಪಾಸಣೆಯಲ್ಲಿ ಮಾರಾಟಕ್ಕಾಗಿ ಇರಿಸಲಾಗಿದ್ದ 4.320 ಗ್ರಾಂ ಗಾಂಜಾ ಹಾಗೂ 0.430 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.

0 Comments