ಕಾಸರಗೋಡು: ಕಾಸರಗೋಡು ವಿದ್ಯಾನಗರ ಐಟಿಐ ರಸ್ತೆಯ ನಿವಾಸಿ ಮರ್ವಾನ್ ಮುನವ್ವರ್ ಅವರು ರಾಜ್ಯ ವಿಕಲಚೇತನರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವಿಕಲಚೇತನರ ಕ್ಷೇತ್ರದಲ್ಲಿ ಶ್ಲಾಘನೀಯ ಸೇವೆ ಹಾಗೂ ಸಾಧನೆ ಮಾಡಿದ ವ್ಯಕ್ತಿಗಳಿಗೆ ನೀಡುವ ಈ ಪ್ರಶಸ್ತಿಗೆ ಕಲೆ, ಸಾಹಿತ್ಯ ಮತ್ತು ಕ್ರೀಡಾ ವಿಭಾಗದಲ್ಲಿ ಮರ್ವಾನ್ ಅವರನ್ನು ಆಯ್ಕೆ ಮಾಡಲಾಗಿದೆ.
ಡಿಸೆಂಬರ್ 3ರಂದು ತಿರುವನಂತಪುರದ ವೆಳ್ಳಯಂಬಲಂನ ಜಿಮ್ಮಿ ಜಾರ್ಜ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಆಟಿಸಂನ ಸವಾಲುಗಳನ್ನು ಮೀರಿ ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಮರ್ವಾನ್ ಈಗಾಗಲೇ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸಂಗೀತದ ಮೇಲಿನ ಅಪಾರ ಆಸಕ್ತಿ, ಅದ್ಭುತ ಶ್ರುತಿಜ್ಞಾನ ಹಾಗೂ ಧ್ವನಿಗಳನ್ನು ನೆನಪಿಟ್ಟುಕೊಂಡು ಅನುಕರಿಸುವ ವಿಶಿಷ್ಟ ಸಾಮರ್ಥ್ಯ ಅವರ ಪ್ರತಿಭೆಗೆ ಸಾಕ್ಷಿಯಾಗಿದೆ.
ಪ್ಲೇಬ್ಯಾಕ್ ಗಾಯನ, ವೃತ್ತಿಪರ ಸಂಗೀತ ಆಲ್ಬಂಗಳು ಹಾಗೂ ಲೈವ್ ಸಂಗೀತ ಕಾರ್ಯಕ್ರಮಗಳ ಮೂಲಕ ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಇದರ ಜೊತೆಗೆ ಪವಿತ್ರ ಕುರ್ಆನ್ ಅಧ್ಯಯನ ಮಾಡುತ್ತಿದ್ದು, ಇತರರಿಗೂ ಕಲಿಸುತ್ತಿದ್ದಾರೆ. ಮಿತಿಗಳಿಗಿಂತ ವ್ಯಕ್ತಿಯಲ್ಲಿರುವ ಸಾಮರ್ಥ್ಯವನ್ನು ಗುರುತಿಸಬೇಕು ಎಂಬ ಸಂದೇಶವನ್ನು ತಮ್ಮ ಸಾಧನೆಯ ಮೂಲಕ ಮರ್ವಾನ್ ಸಾರುತ್ತಿದ್ದಾರೆ. ಅವರ ಜೀವನ ಆತ್ಮವಿಶ್ವಾಸ, ನಿರಂತರ ಪ್ರಯತ್ನ ಮತ್ತು ಸಾಧನೆಯ ಸಂಕೇತವಾಗಿದೆ.
ತಳಂಗರೆ ತಿರುವತ್ತ್ ಉಬೈದ್ ರಸ್ತೆಯ ದಿವಂಗತ ಡಾ. ವಿ.ಎಂ. ಪಳ್ಳಿಕ್ಕಲ್ ಅವರ ಮೊಮ್ಮಗನಾಗಿರುವ ಮರ್ವಾನ್, ವಿ.ಎಂ. ಮುನವ್ವರ್ ಶುಐಬ್ ಮತ್ತು ಶಬೀಲಾ ದಂಪತಿಯ ಪುತ್ರ. ಸಂಗೀತ ನಿರ್ದೇಶಕ ಹಾಗೂ ಮ್ಯೂಸಿಕ್ ಥೆರಪಿಸ್ಟ್ ಎಡಪ್ಪಾಳ್ನ ನಿರ್ಷಾದ್ ನಿನಿನ್ ಅವರ ಶಿಷ್ಯರಾಗಿದ್ದಾರೆ.
.png)
0 Comments