ಮಂಗಳೂರು : ನಿಷೇದಿತ ಮಾದಕ ವಸ್ತು ಎಂಡಿಎಂಎ ಕೊರಿಯರ್ ಮೂಲಕ ಖರೀದಿಸಿ ಮಂಗಳೂರು ನಗರದ ಲಾಲ್ ಭಾಗ್ ಪರಿಸರದಲ್ಲಿ ಮಾರಾಟ ಮಾಡುತ್ತಿದ್ದವನನ್ನು ಬಂಧಿಸಿದ ಮಂಗಳೂರು ಸಿಸಿಬಿ ಪೊಲೀಸರು 11 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.
ಸುಳ್ಯ ಪೆರುವಾಜೆ ಗ್ರಾಮ ನಿವಾಸಿ ಮೊಹಮ್ಮದ್ ಅಶ್ರಪ್ ಅಲಂತಡ್ಕ(50) ಬಂಧಿತ ಆರೋಪಿ. ಈತನ ಕೈಯಿಂದ 1 ಲಕ್ಷ ಮೌಲ್ಯದ 11 ಗ್ರಾಂ ನಿಷೇದಿತ ಮಾದಕ ವಸ್ತು ಎಂಡಿಎಂಎ, ಮೊಬೈಲ್ ಫೋನ್-1, ಹೊಂಡಾ ಅಕ್ಟಿವಾ ಸ್ಕೂಟರ್ ಸಹಿತ ಒಟ್ಟು ರೂ. 1,60,000/- ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ ರವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ರಫೀಕ್ ಕೆ ಎಂ ರವರ ನೇತೃತ್ವದಲ್ಲಿ ಪಿಎಸ್‌ಐ ಸುದೀಪ್ ಎಂ ವಿ, ಶರಣಪ್ಪ ಭಂಡಾರಿ, ಎಎಸ್‌ಐ ಮೋಹನ್ ಕೆ ವಿ, ರಾಮ ಹಾಗೂ ಸಿಸಿಬಿ ಸಿಬ್ಬಂದಿಯವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
ದೆಹಲಿಯಿಂದ ನಿಷೇದಿತ ಮಾದಕ ವಸ್ತುವಾದ ಎಂಡಿಎಂಎನ್ನು ಕೊರಿಯರ್ ಮೂಲಕ ಮಂಗಳೂರಿಗೆ ತರಿಸಿ ನಗರದ ವಿವಿದೆಡೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಪೊಲೀಸರು ಎಂಡಿಎಂಎ ಮಾದಕ ವಸ್ತುವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ದ್ವಿಚಕ್ರ ವಾಹನವನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.
0 Comments