Ticker

6/recent/ticker-posts

ಪೆರಡಾಲ ದೇವಳದ ಸಹಾಯಕ ಅರ್ಚಕ ಬಾಲಸುಬ್ರಹ್ಮಣ್ಯ ಭಟ್ಟರಿಗೆ ಬೀಳ್ಕೊಡುಗೆ ಸಮಾರಂಭ


 

ಬದಿಯಡ್ಕ: ಬಾಲ್ಯದಿಂದಲೇ ಪೆರಡಾಲ ಶ್ರೀ ಉದನೇಶ್ವರ ದೇವರ ಸೇವಾಕೈಂಕರ್ಯವನ್ನು ಮಾಡುತ್ತಾ ಆಗಮಿಸಿದ ಭಗವದ್ಭಕ್ತರ ಪ್ರೀತಿಯನ್ನು ಗಳಿಸುವಲ್ಲಿ ಮಾತೃಪ್ಪಾಡಿ ಬಾಲಸುಬ್ರಹ್ಮಣ್ಯ ಭಟ್ಟರು ಯಶಸ್ವಿಯಾಗಿದ್ದಾರೆ. ಅವರ ಇಡೀ ಕುಟುಂಬವು ಶ್ರೀಕ್ಷೇತ್ರದ ಅಭಿವೃದ್ಧಿಗೆ ಅನನ್ಯ ಕೊಡುಗೆಯನ್ನು ನೀಡಿದೆ ಎಂದು ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ, ಹಿರಿಯ ನ್ಯಾಯವಾದಿ ಐ.ವಿ. ಭಟ್ ಅಭಿಪ್ರಾಯಪಟ್ಟರು.

45 ವರ್ಷಗಳಿಗಿಂತಲೂ ಹೆಚ್ಚುಕಾಲ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಸಹಾಯಕ ಅರ್ಚಕನಾಗಿ ಸೇವೆಸಲ್ಲಿಸಿದ ಮಾತೃಪ್ಪಾಡಿ ಬಾಲಸುಬ್ರಹ್ಮಣ್ಯ ಭಟ್ ಅವರಿಗೆ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ವಸಂತ ಪೈ ಬದಿಯಡ್ಕ ಮಾತನಾಡಿ ಕರ್ತವ್ಯದಲ್ಲಿ ಪ್ರಾಮಾಣಿಕತೆಯಿದ್ದರೆ ಜೀವನದಲ್ಲಿ ಗೆಲುವು. ನಮ್ಮ ವಿಜಯಕ್ಕೂ, ಸೋಲಿಗೂ ನಾವೇ ಕಾರಣ ಎಂಬುದನ್ನು ಪ್ರತಿಯೊಬ್ಬರು ಅರಿತಿರಬೇಕು. ಪ್ರಾಮಾಣಿಕತೆಯಿಂದ ಜೀವನದ ಪ್ರತೀ ಹೆಜ್ಜೆಯಲ್ಲೂ ಮುಂದುವರಿಯಬೇಕು. ಸಾಧನೆ ಮಾಡುವುದೇ ನಮ್ಮ ಧ್ಯೇಯವಾಗಿರಬೇಕು. ಪುಣ್ಯವಂತರಿಗೆ ಮಾತ್ರ ದೇವರ ಸೇವೆಯನ್ನು ಮಾಡಲು ಅವಕಾಶ ಲಭಿಸುತ್ತದೆ. ಹೆತ್ತತಾಯಿ, ಊರಿನ ದೇವಾಲಯ, ವಿದ್ಯೆ ಕಲಿಸಿದ ಗುರುವಿನ ಋಣವನ್ನು ತೀರಿಸುವುದು ಅಸಾಧ್ಯ. ಸದಾ ಹಸನ್ಮುಖಿಯಾಗಿ ಎಲ್ಲವನ್ನೂ ಎದುರಿಸುವ ಬಾಲ ಸುಬ್ರಹ್ಮಣ್ಯ ಭಟ್ಟರು ದೇವರ ಹಾಗೂ ನಾಡಿನ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರ ನಿವೃತ್ತ ಜೀವನ ಸುಂದರವಾಗಿರಲಿ ಎಂದರು.

ಸೇವಾ ಸಮಿತಿಯ ಅಧ್ಯಕ್ಷ ಜಯದೇವ ಖಂಡಿಗೆ, ಮಾಜಿ ಆಡಳಿತ ಮೊಕ್ತೇಸರ ಟಿ.ಕೆ.ನಾರಾಯಣ ಭಟ್,  ಹಿರಿಯರಾದ ಕೃಷ್ಣಪ್ರಸಾದ ರೈ ಪೆರಡಾಲಗುತ್ತು ಶುಭಕೋರಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಲಬಾರ್ ದೇವಸ್ವಂ ಬೋರ್ಡ್ನ ಇನ್ಸ್ಪೆಕ್ಟರ್ ಆಗಿ ಕರ್ತವ್ಯದಿಂದ ನಿವೃತರಾದ ಉಮೇಶ್ ಅಟ್ಟೆಗೋಳಿ ಇವರಿಗೆ ಗೌರವಾರ್ಪಣೆ ನಡೆಯಿತು. ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿ ದೇವಸ್ವಂ ಬೋರ್ಡ್ ಮತ್ತು ದೇವಸ್ಥಾನಗಳ ಬಗ್ಗೆ ವಿವರಣೆಯನ್ನು ನೀಡಿದರು. ಸನ್ಮಾನವನ್ನು ಸ್ವೀಕರಿಸಿ ಬಾಲಸುಬ್ರಹ್ಮಣ್ಯ ಭಟ್ ಅವರು ಮಾತನಾಡಿ ಅಣ್ಣನೊಂದಿಗೆ ಸಹಾಯಕನಾಗಿ ದುಡಿದು ಮುಂದೆ ಖಾಯಂ ನೌಕರನಾಗಿ ಸೇವೆ ಸಲ್ಲಿಸಲು ಸಿಕ್ಕಿದ ಅವಕಾಶವನ್ನು ನೆನೆದು ತನ್ನೊಂದಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು. ಅವರ ಪತ್ನಿ ರಮಾದೇವಿ ಅವರೂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಡಳಿತ ಮೊಕ್ತೇಸರ ವೆಂಕಟರಮಣ ಭಟ್ ಚಂಬಲ್ತಿಮಾರು ಸ್ವಾಗತಿಸಿದರು. ಆಡಳಿತ ಸಮಿತಿ ಸದಸ್ಯ ಸೀತಾರಾಮ ನವಕಾನ ವಂದಿಸಿದರು. ನಿರಂಜನ ರೈ ಪೆರಡಾಲ ನಿರೂಪಿಸಿದರು. ವೆಂಕಟೇಶ್ವರ ಭಟ್ ಪಟ್ಟಾಜೆ ವೈದಿಕ ಪ್ರಾರ್ಥನೆ ನಡೆಸಿಕೊಟ್ಟರು.


ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಬಾಲಸುಬ್ರಹ್ಮಣ್ಯ ಭಟ್ ಮಾತೃಪ್ಪಾಡಿ ದಂಪತಿಗಳನ್ನು ಹಾಗೂ ಮಲಬಾರ್ ದೇವಸ್ವಂ ಬೋರ್ಡ್ನ ಇನ್ಸ್ಪೆಕ್ಟರ್ ಆಗಿ ಕರ್ತವ್ಯದಿಂದ ನಿವೃತರಾದ ಉಮೇಶ್ ಅಟ್ಟೆಗೋಳಿ ಇವರಿಗೆ ಗೌರವಾರ್ಪಣೆ ಭಾನುವಾರ ಶ್ರೀ ಉದನೇಶ್ವರ ಸಭಾಭವನದಲ್ಲಿ ನಡೆಯಿತು.

Post a Comment

0 Comments