ರೈಲಿನಲ್ಲಿ ಭಿಕ್ಷೆ ಬೇಡುತ್ತಿದ್ದ ಯುವತಿಯನ್ನು ರಕ್ಷಿಸಿ ಆಕೆಯನ್ನು ಕುಟುಂಬಸ್ಥರೊಂದಿಗೆ ಸೇರಿಸಿ ಆಕೆಯನ್ನೇ ಯುವಕನೋರ್ವ ಮದುವೆಯಾಗಿರುವ ಅಪರೂಪದ ಘಟನೆ ಬಿಹಾರದಲ್ಲಿ ವರದಿಯಾಗಿದೆ. ಬಿಹಾರದ ಬಕ್ಸಾರ್ ನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ನಿವಾಸಿ ಗೋಲು ಯಾದವ್ ಅನಾಥ ಹುಡುಗಿಯನ್ನು ಕೆಟ್ಟದೃಷ್ಟಿಗಳಿಂದ ರಕ್ಷಿಸಿ, ಅವಳನ್ನು ಮದುವೆಯಾಗಿ, ಹೀರೋ ಆಗಿದ್ದಾರೆ. ಆ ಮೂಲಕ ಗೋಲು ಯಾದವ್ ಇದೀಗ ಬಿಹಾರದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದಾರೆ.
ಗೋಲು ಯಾದವ್ ಒಂದು ದಿನ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಒಬ್ಬ ಯುವತಿಯು ಪ್ರಯಾಣಿಕರಿಂದ ಭಿಕ್ಷೆ ಬೇಡುತ್ತಿರುವುದನ್ನು ನೋಡಿದ್ದಾನೆ. ಆ ಹುಡುಗಿ ಅನಾಥಳಾಗಿದ್ದಳು ಮತ್ತು ಒಂಟಿಯಾಗಿ ಪ್ರಯಾಣಿಸುತ್ತಿದ್ದಳು. ಅನೇಕ ಜನರು ಅವಳನ್ನು ವಿಚಿತ್ರ ಮತ್ತು ಅನುಚಿತ ನೋಟದಿಂದ ನೋಡುತ್ತಿದ್ದರು. ಇದನ್ನು ಕಂಡ ಗೋಲು ಯಾದವ್ ಮರುಗಿದ್ದು, ಕೂಡಲೇ ಆಕೆಗೆ ಸಹಾಯ ಮಾಡಬೇಕು ಎಂದು ನಿರ್ಧರಿಸಿದ್ದಾನೆ. ಅದರಂತೆ ಆತ ಅಲ್ಲಿಯೇ ಬಿಟ್ಟರೆ ಏನಾದರೂ ಅನಾಹುತ ಸಂಭವಿಸಬಹುದು ಎಂದು ಆತಂಕದಿಂದ ಎಲ್ಲರೆದುರೇ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಆಕೆ ಕೊಂಚ ಮುಜುಗರಕ್ಕೊಳಗಾದರೂ ಬಳಿಕ ಗೋಲು ಯಾದವ್ ಜೊತೆ ಹೋಗಲು ನಿರ್ಧರಿಸಿದ್ದಾಳೆ. ಬಳಿಕ ಆಕೆಯನ್ನು ತನ್ನ ಮನೆಗೆ ಕರೆದೊಯ್ದ ಗೋಲು ಯಾದವ್ ತನ್ನ ಪೋಷಕರಿಗೆ ನಡೆದ ಎಲ್ಲ ವಿಚಾರ ತಿಳಿಸಿದ್ದು, ಕುಟುಂಬಸ್ಥರೂ ಕೂಡ ಪರಿಸ್ಥಿತಿ ಅರ್ಥ ಮಾಡಿಕೊಂಡು ಗೋಲು ಯಾದವ್ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಸಂತ್ರಸ್ಥೆಯೊಂದಿಗೆ ಮಾತು ಬೆಳೆಸಿ ಆಕೆಯಿಂದ ಮಾಹಿತಿ ಸಂಗ್ರಹಿಸಿ ಕೊನೆಗೂ ಆಕೆಯ ಕುಟುಂಬವನ್ನು ಪತ್ತೆ ಮಾಡಿದ್ದಾನೆ. ಆಕೆಯನ್ನು ಆಕೆಯ ಊರಿಗೆ ಕರೆದೊಯ್ದು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ಬಳಿಕ ಆಕೆಯನ್ನು ತಾನೇ ಮದುವೆಯಾಗುವುದಾಗಿ ಗೋಲು ಯಾದವ್ ಹೇಳಿಕೊಂಡಿದ್ದು ಇದಕ್ಕೆ ಕುಟುಂಬಸ್ಥರೂ ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಇದೀಗ ಗೋಲು ಯಾದವ್ ಸಂತ್ರಸ್ಥೆಯನ್ನು ಮದುವೆಯಾಗಿದ್ದು ಅವರ ಮದುವೆಯ ಫೋಟೋಗಳು ಇಂಟರ್ನೆಟ್‌ನಲ್ಲಿ ವ್ಯಾಪಕ ವೈರಲ್ ಆಗುತ್ತಿವೆ.

0 Comments