Ticker

6/recent/ticker-posts

Ad Code

ಸಾವಿರ ರೂ. ಆರ್ಥಿಕ ನೆರವಿನ ಮಹಿಳಾ ಭದ್ರತಾ ಯೋಜನೆ: ಇಂದಿನಿಂದ ಅರ್ಜಿ ಸ್ವೀಕಾರ

 


ತಿರುವನಂತಪುರ: ರಾಜ್ಯದ ಮಹಿಳೆಯರ ಕಲ್ಯಾಣವನ್ನು ಖಚಿತಪಡಿಸುವ ಉದ್ದೇಶದಿಂದ ಕೇರಳ ಸರ್ಕಾರ ಜಾರಿಗೆ ತಂದಿರುವ ‘ಮಹಿಳಾ ಭದ್ರತಾ ಯೋಜನೆ’ಗೆ ಡಿಸೆಂಬರ್ 22ರಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ ಎಂದು ಸ್ಥಳೀಯ ಸ್ವರಾಜ್ಯ ಇಲಾಖೆಯ ಪ್ರಿನ್ಸಿಪಲ್ ನಿರ್ದೇಶಕರು ತಿಳಿಸಿದ್ದಾರೆ. ಪ್ರಸ್ತುತ ರಾಜ್ಯದ ಇತರ ಯಾವುದೇ ಸಾಮಾಜಿಕ ಕಲ್ಯಾಣ ಯೋಜನೆಗಳು ಅಥವಾ ಪಿಂಚಣಿಗಳ ಲಾಭ ಪಡೆಯದ ಅರ್ಹ ಮಹಿಳೆಯರಿಗೆ ಈ ಯೋಜನೆಯಡಿ ತಿಂಗಳಿಗೆ 1000 ರೂ. ಆರ್ಥಿಕ ನೆರವು ನೀಡಲಾಗುತ್ತದೆ. ಅರ್ಜಿಗಳನ್ನು ksmart.lsgkerala.gov.in ವೆಬ್‌ಸೈಟ್ ಮೂಲಕ ಸ್ಥಳೀಯ ಸ್ವರಾಜ್ಯ ಸಂಸ್ಥೆಗಳ ಕಾರ್ಯದರ್ಶಿಗಳಿಗೆ ಸಲ್ಲಿಸಬೇಕು.

ಕೇರಳದಲ್ಲಿ ಶಾಶ್ವತ ನಿವಾಸಿಗಳಾಗಿರುವ 35 ರಿಂದ 60 ವರ್ಷದ ವಯಸ್ಸಿನ ಮಹಿಳೆಯರು ಹಾಗೂ ಟ್ರಾನ್ಸ್‌ವಿಮನ್ ವರ್ಗದವರಿಗೆ ಈ ಯೋಜನೆಯ ಪ್ರಯೋಜನ ಲಭ್ಯ. ಅಂತ್ಯೋದಯ ಅನ್ನಯೋಜನೆ (ಹಳದಿ ಕಾರ್ಡ್) ಮತ್ತು ಆದ್ಯತಾ ವರ್ಗ (ಪಿಂಕ್ ಕಾರ್ಡ್) ರೇಷನ್ ಕಾರ್ಡ್ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರು. ವಿಧವಾ ಪಿಂಚಣಿ, ಅವಿವಾಹಿತ ಪಿಂಚಣಿ, ಅಂಗವಿಕಲ ಪಿಂಚಣಿ, ವಿವಿಧ ಸೇವಾ ಪಿಂಚಣಿಗಳು, ಕುಟುಂಬ ಪಿಂಚಣಿ, ಇಪಿಎಫ್ ಪಿಂಚಣಿ ಪಡೆಯುವವರಿಗೆ ಈ ಯೋಜನೆಯಡಿ ಸೌಲಭ್ಯ ದೊರೆಯುವುದಿಲ್ಲ. ಕೇಂದ್ರ ಅಥವಾ ರಾಜ್ಯ ಸರ್ಕಾರಿ ಸೇವೆಯಲ್ಲಿ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ಶಾಶ್ವತವಾಗಿಯೂ ಅಥವಾ ಒಪ್ಪಂದ ಆಧಾರಿತವಾಗಿಯೂ ಉದ್ಯೋಗದಲ್ಲಿರುವವರನ್ನು ಯೋಜನೆಯಿಂದ ಹೊರಗಿಡಲಾಗಿದೆ.

ಅರ್ಜಿದಾರರು ವಯಸ್ಸಿನ ಪ್ರಮಾಣಕ್ಕಾಗಿ ಜನನ ಪ್ರಮಾಣಪತ್ರ, ಶಾಲಾ ಪ್ರಮಾಣಪತ್ರ, ಚಾಲನಾ ಪರವಾನಗಿ ಅಥವಾ ಪಾಸ್‌ಪೋರ್ಟ್ ಇವುಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬೇಕು. ಇವು ಲಭ್ಯವಿಲ್ಲದಿದ್ದಲ್ಲಿ ವೈದ್ಯಾಧಿಕಾರಿ ನೀಡುವ ಪ್ರಮಾಣಪತ್ರವನ್ನು ಬಳಸಬಹುದು. ಬ್ಯಾಂಕ್ ಖಾತೆ ವಿವರಗಳು, ಐಎಫ್‌ಎಸ್‌ಸಿ ಕೋಡ್ ಹಾಗೂ ಆಧಾರ್ ವಿವರಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.

ಅರ್ಜಿಯೊಂದಿಗೆ ಸ್ವಯಂ ದೃಢೀಕರಿಸಿದ ಪ್ರಮಾಣಪತ್ರ (ಸತ್ಯಪ್ರಸ್ತಾವನೆ) ಕೂಡ ಸೇರಿಸಬೇಕು. ಸೌಲಭ್ಯ  ಪಡೆಯುವವರು ಪ್ರತಿವರ್ಷ ಆಧಾರ್ ಆಧಾರಿತವಾಗಿ ವಾರ್ಷಿಕ ಮಾಸ್ಟರಿಂಗ್ ನಡೆಸಬೇಕು. ಲಾಭಾರ್ಥಿಯ ಮರಣದ ಸಂದರ್ಭದಲ್ಲಿ ಸೌಲಭ್ಯವನ್ನು ವಾರಸುದಾರರಿಗೆ ವರ್ಗಾಯಿಸುವ ವ್ಯವಸ್ಥೆ ಇಲ್ಲ. ಲಾಭಾರ್ಥಿ ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಅವಧಿಗೆ ಜೈಲು ಶಿಕ್ಷೆ ಅನುಭವಿಸಿದರೆ ಅಥವಾ ರಿಮಾಂಡ್ ಆಗಿದ್ದರೆ, ಆ ಅವಧಿಗೆ ಆರ್ಥಿಕ ನೆರವು ದೊರೆಯುವುದಿಲ್ಲ.

ತಪ್ಪು ಮಾಹಿತಿಯನ್ನು ನೀಡಿ ಸೌಲಭ್ಯ  ಪಡೆದಿರುವುದು ಪತ್ತೆಯಾದರೆ, 18 ಶೇಕಡಾ ಬಡ್ಡಿಯೊಂದಿಗೆ ಮೊತ್ತವನ್ನು ವಾಪಸು ಪಡೆಯಲಾಗುತ್ತದೆ ಎಂದು ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.

Post a Comment

0 Comments