ಬೆಂಗಳೂರು: ಇಲ್ಲಿನ ರಾಮಮೂರ್ತಿನಗರ ನಿವಾಸಿಯಾಗಿರುವ ಸಂಜನಾ ಅಲಿಯಾಸ್ ವನಜಾ ರಾಮಮೂರ್ತಿನಗರ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಲವ್ ಮಾಡುವಂತೆ ಲವ್ ಲೇಟರ್ ಬರೆದು ಪ್ರೀತಿಸುವಂತೆ ಕಾಡಿದ್ದಳು. ಇನ್ಸ್‌ಪೆಕ್ಟರ್ ಇವಳ ಪ್ರೀತಿ ಒಪ್ಪಿಕೊಳ್ಳದೇ ಇದ್ದಾಗ, ಆತ್ಮಹತ್ಯೆ ಬೆದರಿಕೆ ಹಾಕಿದ್ದಳು. ಇದರಿಂದಾಗಿ ಕರ್ತವ್ಯಕ್ಕೆ ಅಡ್ಡಿ, ಆತ್ಮಹತ್ಯೆ ಬೆದರಿಕೆ ಆರೋಪದ ಅಡಿ ಕೇಸ್ ದಾಖಲಿಸಿ ಸಂಜನಾಳನ್ನು ಬಂಧಿಸಲಾಗಿತ್ತು. ಈ ಬೆನ್ನಲ್ಲೇ ಆರೋಪಿತೆ ಸಂಜನಾಳ ಹಿನ್ನೆಲೆಯನ್ನು ಪರಿಶೀಲಿಸಿದಾಗ ಪೊಲೀಸರನ್ನೇ ಚಕಿತಗೊಳಿಸುವ ಮಾಹಿತಿಗಳು ಬೆಳಕಿಗೆ ಬಂದಿದೆ.
ಇದೇ ಸಂಜನಾ 2 ವರ್ಷಗಳ ಹಿಂದೆ ಕಂಟ್ರ್ಯಾಕ್ಟರ್ ಸತೀಶ್ ರೆಡ್ಡಿ ಎಂಬವರನ್ನು ಪರಿಚಯ ಮಾಡಿಕೊಂಡು, ಅವರನ್ನು ಮನೆಗೆ ಊಟಕ್ಕೆ ಕರೆದು ಅವರ ಜೊತೆ ದೈಹಿಕ ಸಂಪರ್ಕ ಬೆಳಸಿ ಅದರ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ ಆರೋಪವಿದೆ. ಸತೀಶ್ ರೆಡ್ಡಿ ಬಳಿಯಿದ್ದ ಚಿನ್ನದ ಉಂಗುರ, ಸರ, ಮೂರು ಲಕ್ಷ ನಗದು ಕಸಿದುಕೊಂಡಿರುವುದಾಗಿ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅದರ ಜೊತೆಗೆ ಸತೀಶ್ ರೆಡ್ಡಿಗೆ ಸೇರಿದ 2 ಅಂತಸ್ತಿನ ಕಟ್ಟಡವನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಕಿರುಕುಳ ನೀಡಿದ ಆರೋಪದಲ್ಲಿ ಕೆ.ಆರ್ ಪುರ ಪೊಲೀಸ್ ಠಾಣೆಯಲ್ಲೂ ಸಂಜನಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 2018 ರಲ್ಲಿ ಹೆಡ್ ಕಾನ್ಸ್‌ಟೇಬಲ್ ಜಗದೀಶ್ ಎಂಬವರು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳಸಿ ಮೋಸ ಮಾಡಿದ್ದಾರೆ ಎಂದು ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ವಿರುದ್ಧ ದೂರು ನೀಡಿದ್ದಾಳೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಸುಳ್ಳು ಆರೋಪವೆಂದು ಕೇಸ್ ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ತನಿಖೆ ವೇಳೆ ಇದೇ ರೀತಿ ಹಲವರಿಗೆ ಹನಿಟ್ರ್ಯಾಪ್ ಮಾಡಿರುವುದು, ಅಧಿಕಾರಿಗಳ ಪರಿಚಯ ಮಾಡಿಕೊಂಡು ಅವರ ಹೆಸರಿನಲ್ಲಿ ಹಲವರಿಗೆ ಮೋಸ ಮಾಡಿರುವ ವಿಚಾರ ಒಂದೊಂದಾಗಿ ಇದೀಗ ಬೆಳಕಿಗೆ ಬಂದಿದೆ.

0 Comments