Ticker

6/recent/ticker-posts

Ad Code

ಕೇರಳ ವಿಧಾನಸಭಾ ಚುನಾವಣೆ : ಕಾಸರಗೋಡಿನಲ್ಲಿ ಚುರುಕಿನ ಮತದಾನ; ತಮ್ಮ ಹಕ್ಕನ್ನು ಚಲಾಯಿಸಿದ ಅಭ್ಯರ್ಥಿಗಳು

 

ಕಾಸರಗೋಡು : ಇಂದು ಕೇರಳ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು ಕಾಸರಗೋಡು ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಬಿರುಸಿನ ಮತದಾನ ನಡೆಯುತ್ತಿದೆ. ಮತಗಟ್ಟೆಗಳ ಮುಂಭಾಗದಲ್ಲಿ ಮತದಾರರ ಸರದಿ ಸಾಲು ಕಂಡು ಬರುತ್ತಿದ್ದು ಮತದಾನ ಶಾಂತಿಯುತವಾಗಿ ನಡೆಯುತ್ತಿದೆ. ಕಾಸರಗೋಡು ಜಿಲ್ಲೆಯ ಐದು ಸೇರಿದಂತೆ ಕೇರಳದ 140 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದೆ.  ಜಿಲ್ಲೆಯ ಒಟ್ಟು ಐದು ವಿಧಾನಸಭಾ ಕ್ಷೇತ್ರಗಳಲ್ಲಿ 32 ಅಭ್ಯರ್ಥಿಗಳು ಕಣದಲ್ಲಿದ್ದು, ಒಟ್ಟು 11,03,618 ಮತದಾರರಿದ್ದಾರೆ.

ಕಾಸರಗೋಡು ಜಿಲ್ಲೆಯ ಅಭ್ಯರ್ಥಿಗಳು ವಿವಿಧ ಬೂತ್ ಗಳಲ್ಲಾಗಿ  ತಮ್ಮ ವೈಯಕ್ತಿಕ ಮತದಾನದ ಹಕ್ಕನ್ನು ಚಲಾಯಿಸಿದರು.  ಕಾಸರಗೋಡು ಹಾಲಿ ಶಾಸಕ ಎನ್.ಎ.ನೆಲ್ಲಿಕುನ್ನು ಅವರು ನೆಲ್ಲಿಕುಂಜೆಯ ಮತಗಟ್ಟೆಯಲ್ಲಿ, ಕಾಸರಗೋಡು ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಹಾಗೂ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಅವರು ವರ್ಕಾಡಿ  ಪಂಚಾಯತ್‌ನ ಬೂತ್ 49 -  ಕೊಡ್ಲಮೊಗರು ಶ್ರೀ ವಾಣಿವಿಜಯ ಎಯುಪಿ ಶಾಲೆಯಲ್ಲಿ  ಮತ ಚಲಾಯಿಸಿದರು.

ಮಂಜೇಶ್ವರ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಎಕೆಎಂ ಅಶ್ರಫ್ ಅದೇ ಕ್ಷೇತ್ರದ ಬಡಾಜೆ ಸರ್ಕಾರಿ ಎಲ್‌ಪಿ ಶಾಲೆಯ ಬೂತ್‌ನಲ್ಲಿ, ಎಲ್‌ಡಿಎಫ್ ಅಭ್ಯರ್ಥಿ ಕೆ.ಆರ್. ಜಯಾನಂದ  ವಾಮಂಜೂರು ಸರ್ಕಾರಿ ಎಲ್‌ಪಿ ಶಾಲೆಯಲ್ಲಿ ಮತ್ತು ಎನ್‌ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ಕೋಝಿಕ್ಕೋಡ್‌ನಲ್ಲಿ ಮತ ಚಲಾಯಿಸಿದರು.

ಉದುಮ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಕೆ. ನೀಲಕಂಠನ್ ತಮ್ಮ ಪತ್ನಿಯೊಂದಿಗೆ ಕಾರಡ್ಕ ಬೂತ್‌ನಲ್ಲಿ ಮತ  ಚಲಾಯಿಸಿದರು.  ಎಡರಂಗದ ಅಭ್ಯರ್ಥಿ ಸಿ.ಎಚ್. ಕುಂಞಂಬು ಅವರು ಸ್ವತಃ ತಮ್ಮ ಮತವನ್ನು  ಕುಂಡಂಕುಳಿ ಬೂತ್‌ನಲ್ಲಿ ಚಲಾಯಿಸಿದರು. 

ಕಾಞಂಗಾಡ್ ವಿಧಾನಸಭಾ ಕ್ಷೇತ್ರದ ಎಡರಂಗದ ಅಭ್ಯರ್ಥಿ ಗೋವಿಂದನ್ ಪಳ್ಳಿಕಪ್ಪಿಲ್  ಸಾಮಾನ್ಯ ಮತದಾರರಂತೆ ಜನರೊಂದಿಗೆ ಸರದಿಯಲ್ಲಿ ನಿಂತು  ಮತ ಚಲಾಯಿಸಿದರು.  ಕಾಞಂಗಾಡ್ ಯುಡಿಎಫ್ ಅಭ್ಯರ್ಥಿ ಶೈಜಿ ಒಟ್ಟಪಲ್ಲಿ ಕೊಟ್ಟಾಯಂನ ಎಟ್ಟುಮನೂರಿನಲ್ಲಿ, ಬಿಜೆಪಿ ಅಭ್ಯರ್ಥಿ ಎಂ ಬಾಲರಾಜ್ ಹೊಸದುರ್ಗ ಬೂತ್‌ನಲ್ಲಿ ಮತ ಚಲಾಯಿಸಿದರು. 

ತ್ರಿಕರಿಪುರದಲ್ಲಿ ಎಡರಂಗದ ಅಭ್ಯರ್ಥಿ ವಿಪಿಪಿ ಮುಸ್ತಫಾ ಅವರು ವಲ್ವಕ್ಕಾಡ್ ಬೂತ್‌ನಲ್ಲಿ ತಮಗೆ ಸ್ವತಃ ಮತ ಚಲಾಯಿಸಿದರು.  ಯುಡಿಎಫ್ ಅಭ್ಯರ್ಥಿ ಸಂದೀಪ್ ವಾರಿಯರ್ ಪಾಲಕ್ಕಾಡ್‌ನ ಒಟ್ಟಪಾಲಂ ಕ್ಷೇತ್ರದಲ್ಲಿ ತಮ್ಮ ಮತವನ್ನು ಚಲಾಯಿಸಿದರು. ತ್ರಿಕರಿಪುರ ಇನ್ನೋರ್ವ ಅಭ್ಯರ್ಥಿ ರವಿಕುಲಂಗರ ಕ್ಷೇತ್ರದ ಪೊಲ್ಲಪೊಯಿಲ್ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

Post a Comment

0 Comments