Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ದೆಹಲಿ ವಿಮಾನ ನಿಲ್ದಾಣದಲ್ಲಿ ಭಾರಿ ಭದ್ರತಾ ಲೋಪ; ಇಮಿಗ್ರೇಶನ್ ಕ್ಲಿಯರೆನ್ಸ್ ಇಲ್ಲದೆ ದೇಶ ತೊರೆದ ಮೂವರು ವಿದೇಶಿಗರು

ನವದೆಹಲಿ : ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಂಭೀರ ಭದ್ರತಾ ಲೋಪ ಬೆಳಕಿಗೆ ಬಂದಿದೆ. ಇಮಿಗ್ರೇಶನ್ ಪರಿಶೀಲನೆ ಹಾಗೂ ಕ್ಲಿಯರೆನ್ಸ್ ಪೂರ್ಣಗೊಳಿಸದೆ ಮೂವರು ಇಟಲಿ ನಾಗರಿಕರು ವಿದೇಶಕ್ಕೆ ತೆರಳಿರುವುದು ಪತ್ತೆಯಾಗಿದೆ. ಅಮೃತಸರದಿಂದ ಏರ್ ಇಂಡಿಯಾ ವಿಮಾನದಲ್ಲಿ ದೆಹಲಿಗೆ ಬಂದಿದ್ದ ಮೂವರು ಇಟಲಿ ನಾಗರಿಕರು, ಇಮಿಗ್ರೇಶನ್ ಪರಿಶೀಲನೆ ಪೂರ್ಣಗೊಳಿಸದೆ ಲುಫ್ತಾನ್ಸಾ ವಿಮಾನದಲ್ಲಿ ಮ್ಯೂನಿಕ್‌ಗೆ ತೆರಳಿದ್ದಾರೆ. ಸೆಪ್ಟೆಂಬರ್ 3 ಮತ್ತು 4ರ ಮಧ್ಯರಾತ್ರಿ ಈ ಘಟನೆ ನಡೆದಿದೆ.

ಅಮೃತಸರದಿಂದ ಏರ್ ಇಂಡಿಯಾದ AI 1115 ವಿಮಾನದಲ್ಲಿ ದೆಹಲಿಗೆ ಆಗಮಿಸಿದ್ದ ಪ್ರಯಾಣಿಕರಿಗೆ ಅಮೃತಸರದಲ್ಲೇ ದೇಶೀಯ ವಿಮಾನಕ್ಕೆ ಸಂಬಂಧಿಸಿದ ಬೋರ್ಡಿಂಗ್ ಪಾಸ್ ನೀಡಲಾಗಿತ್ತು. ದೆಹಲಿಗೆ ಬಂದ ಬಳಿಕ ನಿಗದಿತ ನಿರ್ಗಮನ ಮಾರ್ಗದ ಮೂಲಕ ಇಮಿಗ್ರೇಶನ್ ಕೌಂಟರ್‌ಗೆ ತೆರಳಬೇಕಿದ್ದ ಅವರನ್ನು ತಪ್ಪಾಗಿ ಅಂತಾರಾಷ್ಟ್ರೀಯ ಟ್ರಾನ್ಸ್‌ಫರ್ ಪ್ರದೇಶದತ್ತ ಕಳುಹಿಸಲಾಗಿದೆ. ಬಳಿಕ ಇಮಿಗ್ರೇಶನ್ ಸ್ಟಾಂಪಿಂಗ್ ಇಲ್ಲದೆ ಲುಫ್ತಾನ್ಸಾದ LH 763 ವಿಮಾನದಲ್ಲಿ ಮ್ಯೂನಿಕ್‌ಗೆ ತೆರಳಿದ್ದಾರೆ.

ಘಟನೆಗೆ ಸಂಬಂಧಿಸಿ ನಾಗರಿಕ ವಿಮಾನಯಾನ ಸಚಿವಾಲಯವು ಏರ್ ಇಂಡಿಯಾ ಸಿಇಒಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ‘ಹಬ್ ಆ್ಯಂಡ್ ಸ್ಪೋಕ್’ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ಸರಿಯಾಗಿ ಪಾಲಿಸುವಲ್ಲಿ ವಿಫಲವಾಗಿರುವುದನ್ನು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಅಮೃತಸರದಲ್ಲೇ ಲುಫ್ತಾನ್ಸಾ ವಿಮಾನಕ್ಕೆ ಮುಂದಿನ ಬೋರ್ಡಿಂಗ್ ಪಾಸ್ ನೀಡಿರುವುದು ಹಾಗೂ ದೆಹಲಿಯಲ್ಲಿ ಪ್ರಯಾಣಿಕರನ್ನು ಸರಿಯಾದ ಮಾರ್ಗಕ್ಕೆ ಕಳುಹಿಸುವಲ್ಲಿ ವಿಫಲವಾಗಿರುವುದು ಗಂಭೀರ ಭದ್ರತಾ ಲೋಪ ಎಂದು ಸಚಿವಾಲಯ ತಿಳಿಸಿದೆ. ಘಟನೆ ಕುರಿತು ಕೇಂದ್ರ ಗೃಹ ಸಚಿವಾಲಯವೂ ತನಿಖೆ ಆರಂಭಿಸಿದೆ.

Post a Comment

0 Comments

ಜಾಹೀರಾತು

Responsive Advertisement