Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮೀಡಿಯಾ ಮನಸುಗಳ ತಂಡದಿಂದ ಕೂಳೂರು ಬಸ್ ನಿಲ್ದಾಣ ಸ್ವಚ್ಛತೆ

 

ಮಂಗಳೂರು: ನಗರದ ಹೊರವಲಯದ ಕೂಳೂರು ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದ ‘ಮೀಡಿಯಾ ಮನಸುಗಳು’ ತಂಡವು ನಿಲ್ದಾಣದಲ್ಲಿದ್ದ ಕಸ, ತ್ಯಾಜ್ಯ ಹಾಗೂ ಧೂಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದೆ.

ಕಸ ಮತ್ತು ತ್ಯಾಜ್ಯದ ರಾಶಿಯಿಂದಾಗಿ ಪ್ರಯಾಣಿಕರು ಮುಜುಗರದಿಂದ ಬಳಸುತ್ತಿದ್ದ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸುವ ಮೂಲಕ ತಂಡವು ತನ್ನ 11ನೇ ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿತು.

ಗುರುವಾರ ಬೆಳಿಗ್ಗೆ 7 ಗಂಟೆಗೆ ಸ್ವಚ್ಛತಾ ಕಾರ್ಯ ಆರಂಭಿಸಿದ ತಂಡದ ಸದಸ್ಯರು ನಿಲ್ದಾಣದಲ್ಲಿದ್ದ ಕಸವನ್ನು ಗುಡಿಸಿ ಸಂಗ್ರಹಿಸಿ, ಪ್ಯಾಕ್ ಮಾಡಿ ಮಹಾನಗರ ಪಾಲಿಕೆಯ ತ್ಯಾಜ್ಯ ವಿಲೇವಾರಿ ವಾಹನದ ಮೂಲಕ ಸ್ಥಳಾಂತರಿಸಿದರು. ಪ್ರಯಾಣಿಕರು ಕುಳಿತುಕೊಳ್ಳುವ ಕಬ್ಬಿಣದ ಬೆಂಚುಗಳು ಹಾಗೂ ಹಿಂಭಾಗದಲ್ಲಿದ್ದ ಪ್ರದರ್ಶನ ಫಲಕವನ್ನೂ ನೀರಿನಿಂದ ಸ್ವಚ್ಛಗೊಳಿಸಿದರು.

ಪ್ರತಿದಿನ ಸಾವಿರಾರು ಜನರು ಬಳಸುವ ಈ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಪ್ರಮಾಣದ ತ್ಯಾಜ್ಯ ಸಂಗ್ರಹವಾಗಿತ್ತು. ಸ್ವಚ್ಛತಾ ಕಾರ್ಯ ಪೂರ್ಣಗೊಂಡ ಬಳಿಕ ನಿಲ್ದಾಣದಲ್ಲಿ ಪ್ರತಿನಿತ್ಯ ಕಸ ತೆರವುಗೊಳಿಸುವಂತೆ ಮಹಾನಗರ ಪಾಲಿಕೆಯ ಕಾರ್ಮಿಕರಿಗೆ ತಂಡದ ಸದಸ್ಯರು ಮನವಿ ಮಾಡಿದರು.

ಬಸ್ ನಿಲ್ದಾಣದ ಸ್ವಚ್ಛತೆಗೆ ಅಗತ್ಯವಾದ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಸ್ಥಳೀಯ ಮಾಜಿ ಮಹಾನಗರ ಪಾಲಿಕೆ ಸದಸ್ಯ ಅನಿಲ್ ಕುಮಾರ್ ಅವರಿಗೆ ಹಲವು ಬಾರಿ ದೂರವಾಣಿ ಕರೆ ಮಾಡಿದರೂ ಸ್ಪಂದನೆ ದೊರೆಯಲಿಲ್ಲ ಎಂದು ತಂಡದ ಸದಸ್ಯರು ತಿಳಿಸಿದ್ದಾರೆ. ಇದರಿಂದಾಗಿ ಸ್ವಚ್ಛತಾ ಕಾರ್ಯಕ್ಕೆ ಬೇಕಾದ ನೀರನ್ನು ದೂರದಿಂದಲೇ ಹೊತ್ತು ತರಬೇಕಾಯಿತು.

ಸಾರ್ವಜನಿಕರು ಪ್ರತಿನಿತ್ಯ ಬಳಸುವ ಪ್ರಮುಖ ಬಸ್ ನಿಲ್ದಾಣದ ನಿರ್ವಹಣೆಯಲ್ಲಿ ಸಂಬಂಧಪಟ್ಟವರು ನಿರ್ಲಕ್ಷ್ಯ ವಹಿಸಿರುವುದು ಈ ಸಂದರ್ಭದಲ್ಲಿ ಎದ್ದು ಕಾಣಿಸಿತು.

ಈ ಅಭಿಯಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಹಾಗೂ ‘ಮೀಡಿಯಾ ಮನಸುಗಳು’ ತಂಡದ ಪ್ರಮುಖರಾದ ಶಶಿ ಬೆಳ್ಳಾಯರು, ಗಿರೀಶ್ ಮಣೇಲ್ ಮತ್ತು ಶಿವು ಕುಲಾಲ್ ಸಕ್ರಿಯವಾಗಿ ಪಾಲ್ಗೊಂಡು ಸ್ವಚ್ಛತಾ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದರು.

ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ನಡುವೆಯೂ ಸಾರ್ವಜನಿಕ ಹಿತದೃಷ್ಟಿಯಿಂದ ಯುವಕರ ತಂಡ ಕೈಗೊಂಡ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಬಸ್ ನಿಲ್ದಾಣದ ಸ್ವಚ್ಛತೆಯನ್ನು ನಿರಂತರವಾಗಿ ಕಾಪಾಡಲು ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳಬೇಕೆಂಬ ಆಗ್ರಹವೂ ವ್ಯಕ್ತವಾಗಿದೆ.

Post a Comment

0 Comments

ಜಾಹೀರಾತು

Responsive Advertisement