ಕಾಸರಗೋಡು: ಮನೆಯ ಕಾರ್ಪೋರ್ಟ್ನಲ್ಲಿ ನಿಲ್ಲಿಸಿದ್ದ ಸ್ಕೂಟರ್ ಹಾಗೂ ಮತ್ತೊಂದು ಮನೆಯಿಂದ ನಗದು, ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಂತರ್ಜಿಲ್ಲಾ ಕಳ್ಳರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಪಾಲಕ್ಕಾಡ್ ಜಿಲ್ಲೆಯ ಚಿತ್ತೂರು ಆಯಿರೂರು ಕುಳಕ್ಕಲ್ಪರಂಬು ನಿವಾಸಿ ಆಯಿರೂರು ಜಲೀಲ್ ಯಾನೆ ‘ಶಟರ್ ಜಲೀಲ್’ (39) ಹಾಗೂ ಪಾಲಕ್ಕಾಡ್ ಜಿಲ್ಲೆಯ ಆಲತ್ತೂರು ತಾಲೂಕಿನ ವಂಡಾಳಿ ನಿವಾಸಿ ವಿಶ್ವನಾಥನ್ (55) ಬಂಧಿತ ಆರೋಪಿಗಳು. ಅಕ್ಟೋಬರ್ 12ರಂದು ಸಂಜೆ ಕಣ್ಣೂರಿನಲ್ಲಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಸೆಪ್ಟೆಂಬರ್ 3ರ ರಾತ್ರಿ 10ರಿಂದ ಸೆಪ್ಟೆಂಬರ್ 4ರ ಮುಂಜಾನೆ 4 ಗಂಟೆಯ ನಡುವಿನ ಅವಧಿಯಲ್ಲಿ ಕಳವು ನಡೆದಿತ್ತು. ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡೂರು ಸಮೀಪದ ಓಣಿಬಾಗಿಲ್ನಲ್ಲಿ ವಾಸಿಸುವ ದೂರುದಾರರ ಮನೆಯ ಕಾರ್ಪೋರ್ಟ್ನಲ್ಲಿ ನಿಲ್ಲಿಸಿದ್ದ ಸ್ಕೂಟರ್ ಕಳವು ಮಾಡಲಾಗಿತ್ತು. ಇದೇ ಅವಧಿಯಲ್ಲಿ ಮತ್ತೊಂದು ಮನೆಯಿಂದ ನಗದು, ಚಿನ್ನಾಭರಣ ಸೇರಿದಂತೆ ಹಲವು ವಸ್ತುಗಳನ್ನು ಕಳವು ಮಾಡಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಮೊಬೈಲ್ ಫೋನ್ ಮಾಹಿತಿಗಳನ್ನು ಆಧರಿಸಿ ಹಾಗೂ ಹಿಂದಿನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದವರ ವಿವರಗಳನ್ನು ಸಂಗ್ರಹಿಸಿ ತನಿಖೆ ನಡೆಸಿದರು. ಈ ವೇಳೆ ಆರೋಪಿಗಳ ಕುರಿತು ಮಹತ್ವದ ಸುಳಿವು ಲಭಿಸಿತ್ತು. ಬಳಿಕ ಆರೋಪಿಗಳು ಕಣ್ಣೂರು ಜಿಲ್ಲೆಯಲ್ಲಿರುವುದನ್ನು ಪತ್ತೆಹಚ್ಚಿದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬದಿಯಡ್ಕ ಎಸ್ಐ ಸುನಿಲ್ ಕುಮಾರ್ ಟಿ. ಅವರ ನಿರ್ದೇಶನದಂತೆ ಎಸ್ಐ ವಿನೋದ್ ಕುಮಾರ್ ಪಿ.ಬಿ., ಎಎಸ್ಐ ಸಿನೀಶ್ ಸಿರಿಯಕ್ ಹಾಗೂ ಎಸ್ಸಿಪಿಒ ಗೋಕುಲ್ ಅವರನ್ನೊಳಗೊಂಡ ಪೊಲೀಸ್ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳಿಗೆ ಇತರ ಕಳವು ಪ್ರಕರಣಗಳಲ್ಲಿಯೂ ಸಂಬಂಧವಿದೆಯೇ ಎಂಬ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

0 Comments