Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಪಕೃತಿ ವಿಸ್ಮಯ : ಪದ್ಮಶ್ರೀ ಪುರಸ್ಕೃತ ಸತ್ಯನಾರಾಯಣ ಬೆಳೇರಿ ವಾಣೀನಗರ ಶಾಲೆಗೆ ಕೊಡುಗೆಯಾಗಿ ನೀಡಿದ ಏಕೈಕ ಬಾಳೆಗೊನೆಯಲ್ಲಿ ಏಳು ಕೂಂಬೆಗಳು

ಪೆರ್ಲ : ಪ್ರಕೃತಿಯ ವಿಸ್ಮಯಗಳು ಆಗಾಗ್ಗೆ ಜನರನ್ನು ಬೆರಗುಗೊಳಿಸುತ್ತಲೇ ಇರುತ್ತವೆ. ಅಂತಹದೇ ಒಂದು ಅಪರೂಪದ ಹಾಗೂ ಅಚ್ಚರಿಯ ಘಟನೆ ಕಾಸರಗೋಡು ಜಿಲ್ಲೆಯ ಗಡಿಭಾಗದ ವಾಣೀನಗರದ ಪಡ್ರೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಕೈತೋಟದಲ್ಲಿ ಕಂಡುಬಂದಿದೆ. 

ಇಲ್ಲಿನ ಶಾಲಾ ಆವರಣದಲ್ಲಿ ಬೆಳೆಸಿರುವ ಬಾಳೆಗಿಡವೊಂದರ ಒಂದೇ ಗೊನೆಯಲ್ಲಿ ಬರೋಬ್ಬರಿ ಏಳು ಕೂಂಬೆಗಳು (ಬಾಳೆ ಹೂವು) ಮೂಡಿಬಂದಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. 

ಸಾಮಾನ್ಯವಾಗಿ ಒಂದು ಬಾಳೆಗೊನೆಗೆ ಒಂದೇ ಒಂದು ಕೂಂಬೆ ಇರುವುದು ನಿಸರ್ಗ ನಿಯಮ. ಆದರೆ, ಪಡ್ರೆ ಶಾಲೆಯ ಕೈತೋಟದಲ್ಲಿ ಹಚ್ಚಹಸಿರಾಗಿ ಬೆಳೆದು ನಿಂತಿರುವ ಈ ಬಾಳೆಗಿಡದಲ್ಲಿ, ಒಂದೇ ಮುಖ್ಯ ದಂಟಿನಿಂದ ಕವಲೊಡೆದು ಏಳು ಪ್ರತ್ಯೇಕ ಕೂಂಬೆಗಳು ಒಟ್ಟಿಗೇ ಬಿಟ್ಟಿರುವುದು ಅಚ್ಚರಿ ಮೂಡಿಸಿದೆ.

ಶಾಲೆಯ ಮಕ್ಕಳ ಮಧ್ಯಾಹ್ನದ ಬಿಸಿಯೂಟದ ಸಿದ್ಧತೆಯಲ್ಲಿ ನಿರತರಾಗುವ ಅಡುಗೆ ಸಿಬ್ಬಂದಿ ಪ್ರೇಮಲತಾ ತಮ್ಮ ಮೊಬೈಲ್ ಫೋನ್‌ ಮೂಲಕ ಈ ಅಪರೂಪದ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. 

ಈ ವಿಸ್ಮಯಕಾರಿ ಬಾಳೆಗಿಡದ ಹಿಂದಿನ ಆಸಕ್ತಿದಾಯಕ ಹಿನ್ನೆಲೆಯ ಬಗ್ಗೆಯೂ ಪ್ರೇಮಲತಾ ತಿಳಿಸಿದ್ದಾರೆ. ಶಾಲೆಯ ಹಳೆಯ ವಿದ್ಯಾರ್ಥಿಯೂ ಆಗಿರುವ, ಪದ್ಮಶ್ರೀ ಪುರಸ್ಕೃತ ಭತ್ತದ ತಳಿ ಸಂರಕ್ಷಕ ಸತ್ಯನಾರಾಯಣ ಬೆಳೇರಿ 15ಕ್ಕೂ ಹೆಚ್ಚು ತಳಿಯ ಬಾಳೆಗಳ‌ನ್ನು ಬೆಳೆದಿದ್ದು, ಶಾಲೆಯ ಕೈತೋಟಕ್ಕಾಗಿ ಬೇರೆ ಬೇರೆ ತಳಿಯಬಾಳೆ ಕಂದುಗಳನ್ನು ನೀಡಿದ್ದರು. ಅವರು ನೀಡಿದ ಕಂದುಗಳಲ್ಲಿ ಒಂದು ಪ್ರಸ್ತುತ ಈ ಏಳು ಕೂಂಬೆಗಳ ಪ್ರಕೃತಿ ವಿಸ್ಮಯಕ್ಕೆ ಕಾರಣವಾಗಿದೆ. 

ಬಾಳೆಗಿಡದ ಕಂದಿನ ಜೀವಕೋಶಗಳ ವಿಭಜನೆಯ ಹಂತದಲ್ಲಿ ಉಂಟಾಗುವ ಆನುವಂಶಿಕ ಬದಲಾವಣೆಗಳು, ಗಿಡದ ಬೆಳವಣಿಗೆ ಹಂತದಲ್ಲಿ ತೀವ್ರವಾದ ಹಾರ್ಮೋನ್‌ಗಳ ಸ್ರವಿಸುವಿಕೆ, ಮಣ್ಣಿನಲ್ಲಿ ನಿರ್ದಿಷ್ಟ ಪೋಷಕಾಂಶಗಳು ಅತಿ ಹೆಚ್ಚು ಪ್ರಮಾಣದಲ್ಲಿ ಸಿಕ್ಕಾಗಲೂ ಇಂತಹ ಅಪರೂಪದ ವಿದ್ಯಮಾನಗಳು ಸಂಭವಿಸುತ್ತವೆ ಎಂದು ಕೃಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement