ತಿರುವನಂತಪುರಂ: ರಾಜ್ಯಗಳ ಗಡಿಗಳು ಬೇರೆಯಾದರೂ ಭಾಷೆಯ ಮೇಲಿನ ಪ್ರೀತಿ ಮತ್ತು ಆತ್ಮೀಯತೆಗೆ ಗಡಿಯಿಲ್ಲ ಎಂಬುದಕ್ಕೆ ಕೇರಳ ವಿಧಾನಸಭೆಯಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಕರ್ನಾಟಕದ ಸಾರಿಗೆ ಸಚಿವ ಬೈರತಿ ಸುರೇಶ್ ಅವರನ್ನು ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಅವರು ಕನ್ನಡದಲ್ಲೇ ಸ್ವಾಗತಿಸಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.
ಕರ್ನಾಟಕದ ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಮೈಸೂರು ದಸರಾ ಮಹೋತ್ಸವಕ್ಕೆ ಆಹ್ವಾನಿಸಲು ಕೇರಳದ ಮುಖ್ಯಮಂತ್ರಿಯನ್ನು ಭೇಟಿಯಾಗುವ ಉದ್ದೇಶದಿಂದ ತಿರುವನಂತಪುರಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕೇರಳ ವಿಧಾನಸಭೆಯ ಅಧಿವೇಶನ ನಡೆಯುತ್ತಿದ್ದು, ಸಚಿವರು ವಿಧಾನಸಭೆಯ ಗ್ಯಾಲರಿಯಲ್ಲಿ ಕುಳಿತು ಸದನದ ಕಲಾಪಗಳನ್ನು ವೀಕ್ಷಿಸಿದರು.
ಈ ವೇಳೆ ಕರ್ನಾಟಕದ ಗಡಿಭಾಗದ ಮಂಜೇಶ್ವರ ಕ್ಷೇತ್ರದ ಶಾಸಕ ಎ.ಕೆ.ಎಂ. ಅಶ್ರಫ್ ಅವರು ಸಚಿವರನ್ನು ಕನ್ನಡದಲ್ಲೇ ಆತ್ಮೀಯವಾಗಿ ಸ್ವಾಗತಿಸಿದರು. ಕನ್ನಡದಲ್ಲಿನ ಈ ಮಾತಿಗೆ ಸಭಾಪತಿ ತಿರುವಂಚೂರು ರಾಧಾಕೃಷ್ಣನ್ ಕೂಡ ಸಂತಸ ವ್ಯಕ್ತಪಡಿಸಿದರು. ಸಚಿವರಿಗೆ ಕನ್ನಡ ಅರ್ಥವಾಗಿರಬಹುದು ಎಂಬ ಅಭಿಪ್ರಾಯವನ್ನೂ ಅವರು ಹಂಚಿಕೊಂಡರು.
ಮಂಜೇಶ್ವರ ಕ್ಷೇತ್ರವು ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಪ್ರದೇಶವಾಗಿದ್ದು, ಇಲ್ಲಿನ ಜನರ ಬದುಕಿನಲ್ಲಿ ಕನ್ನಡ ಭಾಷೆಗೆ ವಿಶೇಷ ಸ್ಥಾನವಿದೆ. ಶಾಸಕ ಎ.ಕೆ.ಎಂ. ಅಶ್ರಫ್ ಅವರು ಈ ಹಿಂದೆ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿಯೂ ಕನ್ನಡದಲ್ಲೇ ಸತ್ಯಪ್ರತಿಜ್ಞೆ ಮಾಡಿದ್ದರು. ಸದನದ ವಿವಿಧ ಸಂದರ್ಭಗಳಲ್ಲಿಯೂ ಕನ್ನಡದಲ್ಲಿ ಮಾತನಾಡುವ ಮೂಲಕ ಗಡಿನಾಡಿನ ಭಾಷಾ ಅಸ್ಮಿತೆಯನ್ನು ಎತ್ತಿಹಿಡಿದಿದ್ದಾರೆ.
ಕೇರಳ ವಿಧಾನಸಭೆಯಂತಹ ವೇದಿಕೆಯಲ್ಲಿ ಕನ್ನಡಕ್ಕೆ ದೊರೆತ ಈ ಆತ್ಮೀಯ ಸ್ವಾಗತವು ಭಾಷೆಯ ಮೇಲಿನ ಗೌರವವನ್ನು ಮತ್ತೊಮ್ಮೆ ಸಾರಿದೆ. ಗಡಿನಾಡಿನ ಜನರೊಂದಿಗೆ ಕರ್ನಾಟಕಕ್ಕಿರುವ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಸಂಬಂಧವನ್ನೂ ಈ ಘಟನೆ ಪ್ರತಿಬಿಂಬಿಸಿದೆ.

0 Comments