ಪೆರ್ಲ: ವಾಣಿನಗರದಲ್ಲಿ ನಡೆಯಲಿರುವ ಭಜನಾ ಕಮ್ಮಟ 2026ರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಅಕ್ಟೋಬರ್ 15ರಂದು ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ ಉಳ್ಳಾಲ್ತಿ ಸನ್ನಿಧಿಯಲ್ಲಿ ನಡೆಯಿತು.
ಕುಂಟಾರು ರವೀಶ್ ತಂತ್ರಿಯವರು ಆಮಂತ್ರಣ ಪತ್ರಿಕೆಯನ್ನು ಪ್ರಾರ್ಥಿಸಿ, ಆಶೀರ್ವದಿಸಿದರು. ಹಿರಿಯ ಭಜನಾ ಸಂಕೀರ್ತನಗಾರ ಕೃಷ್ಣ ಆಳ್ವ ಎಣ್ಮಕಜೆ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಭಜನಾ ಕಮ್ಮಟ ಆಯೋಜನಾ ಸಮಿತಿ ಅಧ್ಯಕ್ಷ ರಾಮಕೃಷ್ಣ ಕಾಟುಕುಕ್ಕೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಆಡಳಿತ ಸಮಿತಿ ಪದಾಧಿಕಾರಿ ಟಿ. ಪ್ರಸಾದ್ ಉಪಸ್ಥಿತರಿದ್ದರು. ಸುಮಿತ್ ರಾಜ್ ಸ್ವಾಗತಿಸಿ, ಪುನೀತ್ ವಂದಿಸಿದರು.
ಭಜನಾ ಕಮ್ಮಟ ಆಯೋಜನಾ ಸಮಿತಿ ಎಣ್ಮಕಜೆ ಹಾಗೂ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ನ ಸಹಯೋಗದಲ್ಲಿ ಭಜನಾ ಕಮ್ಮಟ 2026 ಆಯೋಜಿಸಲಾಗುತ್ತಿದೆ. ನವೆಂಬರ್ 14 ಮತ್ತು 15ರಂದು ಎರಡು ದಿನಗಳ ಕಾಲ ವಾಣಿನಗರದ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಕಮ್ಮಟ ನಡೆಯಲಿದೆ.
ಭಜನಾ ಪರಂಪರೆಯ ಸಂರಕ್ಷಣೆ, ಭಜನಾ ಸಂಸ್ಕೃತಿಯ ಪ್ರಸಾರ ಹಾಗೂ ಭಕ್ತರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವುದು ಕಮ್ಮಟದ ಪ್ರಮುಖ ಉದ್ದೇಶವಾಗಿದೆ. ಭಜಕರಲ್ಲಿ ಭಕ್ತಿ, ಶಿಸ್ತು, ಸಾಮೂಹಿಕ ಪ್ರಾರ್ಥನೆ ಮತ್ತು ಪರಸ್ಪರ ಸಹಕಾರದ ಮನೋಭಾವ ಬೆಳೆಸುವುದರ ಜೊತೆಗೆ, ಭಜನಾ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

0 Comments