Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ತರಗತಿಯೊಳಗೆ 'ಚೈನ್ಸಾ'ದಿಂದ ವಿದ್ಯಾರ್ಥಿನಿಯರ ಮೇಲೆ ದಾಳಿ: ಓರ್ವ ವಿದ್ಯಾರ್ಥಿನಿ ಸಾವು; ಮತ್ತೊಬ್ಬಳು ಗಂಭೀರ

ಅನಂತಪುರ: ಶಾಲೆಯಲ್ಲಿ ಪಾಠ ನಡೆಯುತ್ತಿದ್ದ ವೇಳೆ ತರಗತಿಯೊಳಗೆ ನುಗ್ಗಿದ ಯುವಕನೊಬ್ಬ ಚೈನ್ಸಾದಿಂದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ದಾಳಿ ನಡೆಸಿದ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಪ್ತಾಡು ಗ್ರಾಮದಲ್ಲಿ ಶನಿವಾರ ನಡೆದಿದೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದು, ಮತ್ತೊಬ್ಬ ವಿದ್ಯಾರ್ಥಿನಿಗೆ ಗಾಯಗಳಾಗಿವೆ.

ರಾಪ್ತಾಡು ಮಂಡಲದ ರಾಪ್ತಾಡು ಗ್ರಾಮದ ಜಿಲ್ಲಾ ಪಂಚಾಯತ್ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಳಗ್ಗೆ ಸುಮಾರು 10.30ಕ್ಕೆ ಈ ಘಟನೆ ಸಂಭವಿಸಿದೆ. ತರಗತಿಯಲ್ಲಿ ಶಿಕ್ಷಕರು ಇದ್ದಾಗಲೇ ಚೈನ್ಸಾ ಹಿಡಿದು ಒಳನುಗ್ಗಿದ 21 ವರ್ಷದ ಯುವಕ ಏಕಾಏಕಿ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಗಾಯಗೊಂಡ ವಿದ್ಯಾರ್ಥಿನಿಯರನ್ನು ತಕ್ಷಣ ಅನಂತಪುರದ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿಗೆ ಶಸ್ತ್ರಚಿಕಿತ್ಸೆ ನಡೆಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ.

ದಾಳಿ ನಡೆಸಿದ ಆರೋಪಿಯನ್ನು ಹೇಮಂತ್ ಅಲಿಯಾಸ್ ದುಮ್ಮು ಎಂದು ಗುರುತಿಸಲಾಗಿದೆ. ಘಟನೆ ಬಳಿಕ ಶಾಲೆಯಿಂದ ಪರಾರಿಯಾಗಿದ್ದ ಆತನನ್ನು ಪೊಲೀಸರು ಧರ್ಮಾವರಂ ರೈಲು ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಆರೋಪಿ ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರಂ ಮಂಡಲದ ನಾಗಲೂರು ಗ್ರಾಮದ ನಿವಾಸಿಯಾಗಿದ್ದು, ಗಾಯಗೊಂಡ ವಿದ್ಯಾರ್ಥಿನಿಯೊಬ್ಬಳ ದೂರದ ಸಂಬಂಧಿ ಎನ್ನಲಾಗಿದೆ.

ಘಟನೆಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತೀವ್ರ ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯೊಳಗೆ ವಿದ್ಯಾರ್ಥಿನಿಯ ಮೇಲೆ ನಡೆದ ದಾಳಿಯನ್ನು ಖಂಡಿಸಿರುವ ಅವರು, ಗಾಯಗೊಂಡ ವಿದ್ಯಾರ್ಥಿನಿಗೆ ಅತ್ಯುತ್ತಮ ಚಿಕಿತ್ಸೆ ನೀಡುವಂತೆ ವೈದ್ಯಕೀಯ ತಂಡಕ್ಕೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. ಆರೋಪಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಆದೇಶಿಸಿರುವುದಾಗಿಯೂ ಹೇಳಿದ್ದಾರೆ.

ರಾಜ್ಯದ ಶಿಕ್ಷಣ ಸಚಿವ ನಾರಾ ಲೋಕೇಶ್ ಕೂಡ ಘಟನೆಯನ್ನು ಖಂಡಿಸಿದ್ದು, ಶಾಲೆಯಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದ ಅಮಾನವೀಯ ದಾಳಿ ಖಂಡನೀಯ ಎಂದು ತಿಳಿಸಿದ್ದಾರೆ. ಆರೋಪಿಯನ್ನು ಶೀಘ್ರವಾಗಿ ನ್ಯಾಯದ ಮುಂದೆ ತರುವಂತೆ ಮುಖ್ಯಮಂತ್ರಿ ಪೊಲೀಸರಿಗೆ ಸೂಚಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಘಟನೆಯಿಂದ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement