ಕಣ್ಣೂರು : ಮನೆ ಖರೀದಿಸಲು ಪತಿ ಕಳುಹಿಸಿದ್ದ ಹಣ ಹಾಗೂ ಸ್ವಂತ ಉಳಿತಾಯ ಸೇರಿ ಸುಮಾರು 40 ಲಕ್ಷ ರೂ ಕಳೆದುಕೊಂಡಿದ್ದರೆನ್ನಲಾದ ಕಣ್ಣೂರಿನ ಮಾತಮಂಗಲಂನ ಎರಮಂ ಮೇಘಾ(32) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.
ವಿದೇಶದಲ್ಲಿದ್ದ ಪತಿ ಬಿನೀಶ್ ಮನೆ ಖರೀದಿಸುವ ಉದ್ದೇಶದಿಂದ ಹಂತ ಹಂತವಾಗಿ ಹಣ ಕಳುಹಿಸಿದ್ದರು. ಈ ಹಣವನ್ನು ಸುರಕ್ಷಿತವಾಗಿ ಇಟ್ಟುಕೊಂಡು ಮನೆ ಖರೀದಿಗೆ ಬಳಸಬಹುದು ಎಂಬ ನಿರೀಕ್ಷೆ ಅವರದ್ದಾಗಿತ್ತು. ಆದರೆ ಇತ್ತೀಚೆಗೆ ಮನೆ ಖರೀದಿಸುವ ವಿಚಾರವಾಗಿ ಹಣದ ಬಗ್ಗೆ ವಿಚಾರಿಸಿದಾಗ, ಸುಮಾರು 40 ಲಕ್ಷ ರೂ. ಖರ್ಚಾಗಿರುವುದಾಗಿ ಮೇಘಾ ತಿಳಿಸಿದ್ದರು ಎನ್ನಲಾಗಿದೆ.
ಹಣವನ್ನು ಹೇಗೆ ಖರ್ಚು ಮಾಡಲಾಗಿದೆ ಅಥವಾ ಯಾರಿಗೆ ನೀಡಲಾಗಿದೆ ಎಂಬುದರ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿರಲಿಲ್ಲ ಎನ್ನಲಾಗಿದೆ. ಇದರಿಂದ ಮಾನಸಿಕವಾಗಿ ಕುಗ್ಗಿದ್ದ ಮೇಘ ಈ ತಿಂಗಳ 8ರಂದು ಇಲಿ ವಿಷ ಸೇವಿಸಿದ್ದರು. ಅವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಯುವತಿಯ ಕೈಯಲ್ಲಿದ್ದ ಇಷ್ಟೊಂದು ದೊಡ್ಡ ಮೊತ್ತದ ಹಣ ಏನಾಯಿತು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಣಕಾಸಿನ ವಂಚನೆ, ಹೂಡಿಕೆ ಅಥವಾ ಇತರ ವೈಯಕ್ತಿಕ ಕಾರಣಗಳಿಂದ ಹಣ ನಷ್ಟವಾಗಿದೆಯೇ ಎಂಬ ಆಯಾಮಗಳಲ್ಲಿಯೂ ತನಿಖೆ ಮುಂದುವರಿದಿದೆ.
ಮೇಘ ಅವರ ಕುಟುಂಬಸ್ಥರು ಹಾಗೂ ಸಂಬಂಧಿಕರಿಂದ ಪೊಲೀಸರು ಹೇಳಿಕೆಗಳನ್ನು ಸಂಗ್ರಹಿಸುತ್ತಿದ್ದಾರೆ. ಜೊತೆಗೆ ಅವರ ಬ್ಯಾಂಕ್ ಖಾತೆಗಳ ವಹಿವಾಟು, ಮೊಬೈಲ್ ಕರೆಗಳ ವಿವರ ಹಾಗೂ ಇತರ ಡಿಜಿಟಲ್ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಆನ್ಲೈನ್ ವಂಚನೆ ಅಥವಾ ಆನ್ಲೈನ್ ಬೆಟ್ಟಿಂಗ್ನಿಂದ ಹಣ ನಷ್ಟವಾಗಿದೆಯೇ ಎಂಬ ಬಗ್ಗೆಯೂ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಯುವತಿಯ ಸಾವಿಗೆ ನಿಖರವಾದ ಕಾರಣವೇನು ಮತ್ತು 40 ಲಕ್ಷದ ಹಣ ಏನಾಯಿತು ಎಂಬುದು ಸಮಗ್ರ ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ.

0 Comments