ಮಂಗಳೂರು : ಕೈದಿಗಳ ಪುನರ್ವಸತಿ ಹಾಗೂ ಸ್ವಾವಲಂಬಿ ಬದುಕಿಗೆ ನೆರವಾಗುವ ಉದ್ದೇಶದಿಂದ ಪ್ರಿಸನ್ ಮಿನಿಸ್ಟ್ರಿ ಇಂಡಿಯಾ (ಪಿಎಂಐ) ಸಂಸ್ಥೆಯು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಮಂಗಳೂರು ಜಿಲ್ಲಾ ಕಾರಾಗೃಹದ ಕೈದಿಗಳಿಗೆ ಅ. 14ರಿಂದ 16ರವರೆಗೆ ಮೂರು ದಿನಗಳ ಅಣಬೆ ಕೃಷಿ ತರಬೇತಿ ಕಾರ್ಯಕ್ರಮ ಆಯೋಜಿಸಿತ್ತು.
ಕಾಸರಗೋಡಿನ ಪಾಂಡುರಂಗ ಮತ್ತು ಅವರ ತಂಡ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಅಣಬೆ ಕೃಷಿಯ ವಿಧಾನಗಳು ಹಾಗೂ ಅದರ ಮೂಲಕ ಸ್ವಾವಲಂಬಿ ಉದ್ಯೋಗ ಕಂಡುಕೊಳ್ಳುವ ಸಾಧ್ಯತೆಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಿದರು. ಸುಮಾರು 23 ಕೈದಿಗಳು ತರಬೇತಿ ಪಡೆದರು.
ಅ. 16ರಂದು ನಡೆದ ಸಮಾರೋಪ ಸಮಾರಂಭದಲ್ಲಿ ತರಬೇತಿಯಲ್ಲಿ ಭಾಗವಹಿಸಿದ ಕೈದಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಪಿಎಂಐ ಮಂಗಳೂರು ಘಟಕದ ಆಧ್ಯಾತ್ಮಿಕ ನಿರ್ದೇಶಕ ರೆ. ಫಾ. ಸ್ಟೀಫನ್ ಪೆರೇರಾ ಒಸಿಡಿ ಅಧ್ಯಕ್ಷತೆ ವಹಿಸಿದ್ದರು. ಕಾರಾಗೃಹದ ಅಧೀಕ್ಷಕ ಶರಣ ಬಸಪ್ಪ, ಸಹಾಯಕ ಅಧೀಕ್ಷಕ ಸಿದ್ದಪ್ಪ ಪಾಟೀಲ್, ಪಿಎಂಐ ಸಂಯೋಜಕ ಡೊನಾಲ್ಡ್ ಕೌಟಿನ್ಹೊ, ಕಾರ್ಯದರ್ಶಿ ಸಿಸ್ಟರ್ ಜ್ಯೋತ್ಸ್ನಾ ಎ.ಸಿ. ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಫಾ. ಸ್ಟೀಫನ್ ಪೆರೇರಾ, ಕೈದಿಗಳ ಸುಧಾರಣೆ ಮತ್ತು ಪುನರ್ವಸತಿಯಲ್ಲಿ ಕೌಶಲ್ಯಾಭಿವೃದ್ಧಿಯ ಮಹತ್ವವನ್ನು ವಿವರಿಸಿದರು. ಜೈಲಿನಲ್ಲಿರುವ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಇಂತಹ ತರಬೇತಿಗಳು ಸಹಕಾರಿಯಾಗುತ್ತವೆ. ಬಿಡುಗಡೆಯ ಬಳಿಕ ಕಲಿತ ಕೌಶಲ್ಯದ ಮೂಲಕ ಜೀವನೋಪಾಯ ಕಂಡುಕೊಂಡು, ಗೌರವಯುತವಾಗಿ ಸಮಾಜದ ಮುಖ್ಯವಾಹಿನಿಗೆ ಮರಳಲು ಸಾಧ್ಯವಾಗುತ್ತದೆ ಎಂದರು.
ಕಾರಾಗೃಹದ ಅಧೀಕ್ಷಕ ಶರಣ ಬಸಪ್ಪ ಮಾತನಾಡಿ, ಕೈದಿಗಳ ಹಿತದೃಷ್ಟಿಯಿಂದ ಇಂತಹ ಉಪಯುಕ್ತ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಪಿಎಂಐ ಸಂಸ್ಥೆಯನ್ನು ಶ್ಲಾಘಿಸಿದರು. ತರಬೇತಿಯಲ್ಲಿ ಕಲಿತ ಕೌಶಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕೈದಿಗಳಿಗೆ ಕರೆ ನೀಡಿದರು. ಪಿಎಂಐ ಸಹಾಯಕ ಸಂಯೋಜಕ ಲಾರೆನ್ಸ್ ಕ್ರಾಸ್ತಾ ಕಾರ್ಯಕ್ರಮ ಸಂಯೋಜಿಸಿದರು.

.jpeg)
0 Comments