ಬದಿಯಡ್ಕ: ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ, ಕಲಾ ಸಾಮರ್ಥ್ಯವನ್ನು ಅನಾವರಣಗೊಳಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಕುಂಬ್ಳೆ ಉಪಜಿಲ್ಲಾ ಕಲೋತ್ಸವಕ್ಕೆ ಬದಿಯಡ್ಕ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಚಾಲನೆ ದೊರೆಯಿತು. ವಿವಿಧ ವೇದಿಕೆಗಳಲ್ಲಿ ವರ್ಣರಂಜಿತ ಕಲೆಗಳ ಅನಾವರಣ ನಡೆಯುತ್ತಿದ್ದು ಮಧ್ಯಾಹ್ನ ವೇಳೆ ಮಳೆ ಪರಿಸರದಲ್ಲಿ ತಂಪೆರಚಿದೆ.
ಕಲೋತ್ಸವದ ಅಂಗವಾಗಿ ವಿಜೇತ ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಗುವ ಟ್ರೋಫಿಗಳನ್ನು ವ್ಯವಸ್ಥಿತವಾಗಿ ಇರಿಸುವ ಟ್ರೋಫಿ ಪೆವಿಲಿಯನ್‌ನ್ನು ಇನ್‌ಸ್ಪೆಕ್ಟರ್ ಅನೂಪ್ ಕೃಷ್ಣನ್ ಇಂದು ಬೆಳಿಗ್ಗೆ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಮಾಧ್ಯಮ ಮತ್ತು ಪ್ರಚಾರ ಸಮಿತಿ ಕಚೇರಿಯನ್ನು ಬದಿಯಡ್ಕ ಪೊಲೀಸ್ ಠಾಣೆಯ ಹೌಸ್ ಆಫೀಸರ್ ಟಿ. ಸುನಿಲ್ ಕುಮಾರ್ ಉದ್ಘಾಟಿಸಿದರು.
ಕಲೋತ್ಸವದ ಸಿದ್ಧತೆಗಳು ಹಾಗೂ ಕಾರ್ಯಕ್ರಮಗಳ ಸಮರ್ಪಕ ನಿರ್ವಹಣೆಗೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳ ಕಲಾಪ್ರತಿಭೆ ಪ್ರದರ್ಶನಕ್ಕೆ ಸಂಘಟಕ ಸಮಿತಿಗಳು ಸುವ್ಯವಸ್ಥಿತ ಸಿದ್ಧತೆ ನಡೆಸಿದೆ ಎಂದು ತಿಳಿಸಿದ್ದಾರೆ.
ವಿವಿಧ ಕಲಾ ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳ ಸೃಜನಶೀಲತೆ, ಪ್ರತಿಭೆ ಮತ್ತು ಕಲಾಸಕ್ತಿಗೆ ಉತ್ತೇಜನ ನೀಡುವ ಈ ಕಲೋತ್ಸವವು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮೂಡಿಸುವ ನಿರೀಕ್ಷೆಯಿದೆ.
ಇಂದು ಸಂಜೆ ನಡೆಯಲಿರುವ ಅಧಿಕೃತ ಉದ್ಘಾಟನಾ ಸಮಾರಂಭವನ್ನು ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಲಿದ್ದಾರೆ. ಕಲೋತ್ಸವದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಕಾತರರಾಗಿದ್ದು, ಶಾಲಾ ವಠಾರದಲ್ಲಿ ಕಲಾ ಸಂಭ್ರಮದ ವಾತಾವರಣ ಕಳೆ ಏರಿದೆ.


.png)

0 Comments