Ticker

6/recent/ticker-posts

ಎಣ್ಮಕಜೆಯೊಂದಿಗೆ ನಿಕಟ ಸಂಪರ್ಕ ಇರಿಸಿಕೊಂಡಿದ್ದ ವಿ.ಎಸ್.ನೆನಪುಗಳಿನ್ನು ಅಮರ

ವಿಪಕ್ಷ ನಾಯಕನಾಗಿಯೂ, ಮುಖ್ಯಮಂತ್ರಿ ಆಗಿಯೂ ಎಂಡೋಸಲ್ಫನ್ ವಿಷಮಳೆಗೆರೆದ ನಾಡಿನಲ್ಲಿ ನಡೆದಾಡಿದ ಅಚ್ಚುತ್ತಾನಂದನ್ ನೆನಪುಗಳಿಗೆ ಸಾವಿಲ್ಲ....
ನುಡಿ ಚಿತ್ರ : ಜಯ ಮಣಿಯಂಪಾರೆ

ಪೆರ್ಲ : ಕೇರಳ ರಾಜ್ಯದ ಗಡಿನಾಡದ ಕಾಸರಗೋಡಿನ ಕಟ್ಟಕಡೆಯ ಪಂಚಾಯತಾಗಿದೆ ಎಣ್ಮಕಜೆ.ಇಂತಹ ಗ್ರಾಮೀಣ ಪ್ರದೇಶಕ್ಕೂ ಕೂಡಾ ರಾಜ್ಯ ರಾಜಕೀಯ ನೇತಾರನಾಗಿ ಎರಡು ಅವರ್ತಿ ಕಾಲಿರಿಸಿದ ವಿ.ಎಸ್.ಅಚ್ಚುತಾನಂದನ್ ಅವರ ನೆನಪು ಇಲ್ಲಿನ ಜನ ಹೃದಯದಲ್ಲಿ ಇನ್ನೂ ಅಮರವಾಗಿದೆ. 

ತನ್ನ ವಯೋಸಹಜ ವ್ಯಾಧಿ ವ್ಯಾಕುಲತೆಗಳಿದ್ದರೂ ಸದಾ ಜನತೆಯ ಪರ ಇದ್ದು ನಿನ್ನೆಯಷ್ಟೆ ಅಗಲಿದ ಧೀಮಂತ ಚೇತನ. ಕೇರಳದ ಜನತೆ ಕಂಡ ವಿಶಿಷ್ಟ ಮಾಜಿ ಮುಖ್ಯಮಂತ್ರಿ ವಿ.ಎಸ್.ಅಚ್ಚುತಾನಂದನ್ ರ ಚರಿತ್ರಾರ್ಹ ನೆನಪುಗಳು ಇನ್ನು ಇತಿಹಾಸದ ಪುಟಗಳಲ್ಲಿ ಅಮರವಾಗಲಿದೆ.

ಎಡಪಂಥೀಯ ತತ್ವ ಸಿದ್ಧಾಂತ ಹೋರಾಟಗಳ ಐಕಾನ್ ಆಗಿದ್ದ ವಿ.ಎಸ್.ಅಚ್ಚುತಾನಂದನ್ 2001ರಲ್ಲಿ ವಿಪಕ್ಷ ನಾಯಕರಾಗಿ ಎಣ್ಮಕಜೆ‌ ಗ್ರಾಮ ಪಂಚಾಯತ್ ವ್ಯಾಪ್ತಿಯ  ಎಂಡೋಸಲ್ಫನ್ ದುರಂತ ಭೂಮಿಯನ್ನು ವೀಕ್ಷಿಸಲು ಪಡ್ರೆ ವಾಣಿನಗರಕ್ಕಾಗಮಿಸಿದ್ದರು. ಅಲ್ಲಿನ ಜನ ಪ್ರಮುಖರನ್ನು ಭೇಟಿಯಾದ ಬಳಿಕ ನೇರ ಸಂತ್ರಸ್ತರ ಮನೆಗೆ ಭೇಟಿ ನೀಡಿದ ವಿ.ಎಸ್.  ನಡೆದಾಡಿಕೊಂಡೆ ಅಲ್ಲಿನ ಗುಡ್ಡ ಬೆಟ್ಟಗಳನ್ನು ಏರಿಳಿದು ಸಂತ್ರಸ್ತರ ನೇರ ಕಂಡು ಸಮಸ್ಯೆಯನ್ನು ಮನನ ಮಾಡಿರುವುದು ಅವಿಸ್ಮರಣೀಯ ಸಂಗತಿ ಎಂದು ಅಂದು ಅವರ ಜತೆಗೆ ಹೆಜ್ಜೆ ಹಾಕಿರುವ ಸಾಮಾಜಿಕ ಹೋರಾಟಗಾರ ಶ್ರೀನಿವಾಸ್ ನಾಯ್ಕ್ ಪೆರಿಕ್ಕಾನ ಇಂದು ನೆನಪಿಕೊಳ್ಳುತ್ತಾರೆ.

ಎಂಡೋಸಲ್ಫನ್ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ, ಡಾ.ಶ್ರೀಪತಿ ಕಜಂಪಾಡಿ,ಡಾ.ಮೋಹನ್ ಕುಮಾರ್, ಶ್ರೀಪಡ್ರೆ, ದಿ.ಎಂ.ಕೆ.ಬಾಲಕೃಷ್ಣ ಸಹಿತ ಹಲವರ ಅಭಿಪ್ರಾಯಗಳನ್ನು ಸ್ವೀಕರಿಸಿದ ವಿ.ಎಸ್.ಎಂಬ ವಿಪ್ಲವ ನಾಯಕ ಎಂಡೋ ಸಂತ್ರಸ್ತರಿಗಾಗಿ ವಿಧಾನ ಸಭೆಯಲ್ಲಿ ಧ್ವನಿ ಮೊಳಗಿಸಿರುವುದು ಜನಪರ ನಾಯಕತ್ವಕ್ಕೆ ಸಾಕ್ಷಿಯಾಗಿದೆ ಎಂದು ಪ್ರಸ್ತುತ ಎಣ್ಮಕಜೆ ಗ್ರಾ.ಪಂ.ಸದಸ್ಯರು,ವಾಣಿನಗರ ವಾರ್ಡ್ ಪ್ರತಿನಿಧಿಯಾಗಿರುವ ಎಸ್.ಬಿ.ನರಸಿಂಹ ಪೂಜಾರಿ ನೆನಪಿಸಿಕೊಳ್ಳುತ್ತಿದ್ದಾರೆ. 

2011ರಲ್ಲಿ ರಾಜ್ಯ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಎಂಡೋಸಲ್ಪನ್ ಸಂತ್ರಸ್ತರ ಪರವಾಗಿ ಕೇಂದ್ರ ಅಧ್ಯಯನ‌ ತಂಡಕ್ಕೆ ಎಂಡೋಸಲ್ಪನ್ ಬಾಧಿತರ ಬಗ್ಗೆ ಅವಗಣನೆ ಸಲ್ಲದೆಂದು ಸ್ಪಷ್ಡ ಸಂದೇಶ ನೀಡಿ ಎಂಡೋ ವಿರೋಧ ದಿನವನ್ನಾಗಿ ರಾಜ್ಯದಾದ್ಯಂತ ಪ್ರತಿಜ್ಞೆ ಸಾರಿದ ಮುಖ್ಯಮಂತ್ರಿಯಾಗಿ ಗಮನ ಸೆಳೆದಿದ್ದರು.

ವಿಪಕ್ಷದಲ್ಲಿರುವಾಗಲೂ ಆಡಳಿತ ಪಕ್ಷದಲ್ಲಿರುವಾಗಲೂ ಎಣ್ಮಕಜೆಯ ಜನತೆಯ ಬಗ್ಗೆ ಅತೀವ ಪ್ರೀತಿ ಅಭಿಮಾನ ಇರಿಸಿದ್ದ ವಿ.ಎಸ್. ಅಚ್ಚುತಾನಂದನ್ ಒಂದೊಮ್ಮೆ ಇಲ್ಲಿನ ಹಿರಿಯ ಕಮ್ಯೂನಿಷ್ಟ್ ನಾಯಕ ದಿ.ಮದನ ಮಾಸ್ತರ್ ರ 101ನೇ ವಯಸ್ಸಿನಲ್ಲಿ ಭೇಟಿಯಾಗಿ ಕುಶಲೋಪಾರಿ ನಡೆಸಿರುವುದು ಎಡ ಪ್ರಜಾಪ್ರಭುತ್ವ ಪಕ್ಷದ ನಡೆಯಲ್ಲಿ ಅವಿಸ್ಮರಣೀಯ ಸಂಗತಿಯಾಗಿದೆ

ನಿನ್ನೆ ನಿಧನರಾದ ಕೇರಳದ ಮಾಜಿ  ಮುಖ್ಯಮಂತ್ರಿ ಶ್ರೀ ವಿ.ಎಸ್.ಅಚ್ಯುತಾನಂದನ್ ಎಂಬ ವಿಶಿಷ್ಟ ವ್ಯಕ್ತಿತ್ವ ತನ್ನ ಹಾವ ಭಾವ ಭಂಗಿ ಮತ್ತು ಭಾಷಣಗಳಿಂದ ಜನ ಮಾನಸದಲ್ಲಿ ಚಿರಸ್ಥಾಯಿಯಾಗಿದ್ದರು
ಅವರಿಗೆ  ಪಡ್ರೆ ಮತ್ತು ಎಣ್ಮಕಜೆ ಪಂಚಾಯತಿನ ಜನತೆ ಸದಾ ಋಣಿಯಾಗಿದ್ದಾರೆ.ಅವರು ವಿರೋಧ ಪಕ್ಷದ ನಾಯಕರಾಗಿದ್ದ ಕಾಲ(2001-06)ದಲ್ಲಿ ಪಡ್ರೆ ಮತ್ತು ಸುತ್ತು ಮುತ್ತಲೂ ನಡೆಯುತ್ತಿದ್ದ ಮುಂದೆ ಲೋಕಾದ್ಯಂತ ಚರ್ಚಿಸಲಾದ ಎಂಡೋಸಲ್ಫಾನ್ ಮಹಾ ದುರಂತಕ್ಕೆದುರಾದ ಹೋರಾಟದ ಬೆಂಬಲ ನೀಡಿದ್ದು ಮಾತ್ರವಲ್ಲ, ಅದರ ನೇತ್ರತ್ವವನ್ನು ಸ್ವಯಂ ವಹಿಸಿ ಕೊಂಡರು.ಕೇವಲ ಕಾಸರಗೋಡಿಗೆ ಸೀಮಿತವಾಗಿದ್ದ ಈ ಹೋರಾಟದ ಕೇಂದ್ರವು ಕೇರಳದ ರಾಜಧಾನಿ ತಿರುವನಂತಪುರಕ್ಕೂ ,ಶಾಸನ ಸಭೆಗೂ ತಲುಪಿದ ಕಾರಣ ಎಂಡೋಸಲ್ಫಾನ್ ಗೆ ಶಾಶ್ವತ ವಾಗಿ ನಿಷೇಧ ಹೇರಲಾಯಿತು. ವಿ.ಎಸ್ ಅವರ ವಿಧಾನ ಸಭೆಯ ಒಳಗೆ ಮತ್ತು ಹೊರಗಿನ ನಿರಂತರವಾದ ಹೋರಾಟದ ಫಲವೇ ಆಗಿದೆ.ನಂತರ ಅವರು ಮುಖ್ಯಮಂತ್ರಿ ಯಾಗಿ ಆಯ್ಕೆ ಆದ ಕೆಲವೇ ದಿನಗಳಲ್ಲಿ ಪಡ್ರೆಗೆ ಆಗಮಿಸಿ ನಮ್ಮ ಶಾಲೆಯ ಜಗಲಿಯಲ್ಲೇ ನಿಂತು ಪೀಡಿತರಾದವರಿಗೆ ಧನಸಹಾಯ ಮತ್ತು ಚಿಕಿತ್ಸೆಯನ್ನು ಸರಕಾರ ವಹಿಸುವುದಾಗಿ ಘೋಷಿಸಿದರು.ನಂತರ ಈ ದರಂತಕ್ಕೀಡಾಡ ಪ್ರದೇಶವೆಂಬ ಪರಿಗಣನೆಯಿಂದ ನಮ್ಮ ಪ್ರದೇಶಕ್ಕೆ ದೊರಕಿರುವ ಸೌಲಭ್ಯಗಳ ಮಹಾಪೂರವೇ ಹರಿದು ಬಂತು.ಸಾವಿಗೀಡಾದವರ ಮನೆಯವರಿಗೆ ಲಕ್ಷಗಟ್ಟಲೆ ಧನಸಹಾಯ,ಅಂಗ ವೈಕಲ್ಯಹೊಂದಿದವರಿಗೆ ಪ್ರತಿ ತಿಂಗಳೂ ಸಹಾಯಧನ, ಸಲಕರಣೆಗಳ ವಿತರಣೆ ,ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಉನ್ನತ ಆರೋಗ್ಯ ಸಂಘದಿಂದ ಆರೋಗ್ಯ ತಪಾಸಣಾ ಶಿಬಿರಗಳು,ಉಚಿತ ಚಿಕಿತ್ಸೆ ಮತ್ತು ಔಷಧಿಯ ವಿತರಣೆ ಹೀಗೆ ಅವರಿಗಾಗಿ ಏನೆಲ್ಲಾ ಮಾಡಬಹುದೋ ಅದೆಲ್ಲವನ್ನೂ ತಮ್ಮ ಐದು ವರ್ಷದ ಕಾಲದಲ್ಲಿ ಮಾಡಿದರು.ನಮ್ಮ ವಾಣೀನಗರದಲ್ಲಿರುವ ಸರಕಾರೀ ಆಸ್ಪತ್ರೆಯ ಅಭಿವೃದ್ಧಿ ಆಗಿರುವುದರಲ್ಲಿ ಇದು ಎಂಡೋಸಲ್ಫಾನ್ ಬಾದಿತ ಪ್ರದೇಶವೆಂಬ ಪರಿಗಣನೆಯೂ ಇದೆ.ಕಾಸರಗೋಡಿನ ಪಟ್ಟಣ ಪ್ರದೇಶದಲ್ಲಿ ಆಗಬೇಕಾಗಿದ್ದ ಮೆಡಿಕಲ್ ಕಾಲೇಜು ನಮ್ಮ ನೆರೆಯ ಉಕ್ಕಿನಡ್ಕದಲ್ಲಿ ಸ್ಥಾಪನೆಯಾಗುವುದಕ್ಕೂ ಎಣ್ಮಕಜೆ ಪಂಚಾಯತಿನ ಬಜಕೂಡ್ಲು ಬಡ್ಸ್ ಸ್ಕೂಲ್ ಮಂಜೂರಾಗಲೂ ತೀವ್ರ ಎಂಡೋಸಲ್ಫಾನ್ ಪೀಡಿತ ಪ್ರದೇಶ ಎಂಬ ಪರಿಗಣನೆಯಿಂದಲೇ. ಪ್ರತಿವರ್ಷ ಪಡ್ರೆ ಶಾಲೆಗೆ ದಾಖಲಾಗುತ್ತಿದ್ದ ಎಂಡೋಸಲ್ಫಾನ್ ಪೀಡಿತ ಮಕ್ಕಳನ್ನು ನಿಭಾಯಿಸುವುದು ಎಷ್ಟು ಸವಾಲಿನ ಕೆಲಸವಾಗಿತ್ತು ಎಂಬುದು ಆಗ ಇಲ್ಲಿ ಅಧ್ಯಾಪರಾಗಿದ್ದವರಿಗೇ ಗೊತ್ತು.ಈಗ ಅದೆಲ್ಲಾ ಇಲ್ಲವಾಗಿ ಜನರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.ಇದಕ್ಕೆಲ್ಲಾ ನಿನ್ನೆ ಚಿರನಿದ್ರೆಗೆ ಜಾರಿರುವ ಕೇರಳದ ಜನತೆ ಒಂದಾಗಿ ಗೌರವಿಸುವ ಅವರು ಪ್ರೀತಿಯಿಂದ ಕಣ್ಣೇ..ಕರಳೇ..ಎಂದು ಕರೆಯುವ ವಿ.ಎಸ್.ಆಗಿದ್ದಾರೆ.ಅಗಲಿದ ಆ ಮಹಾ ಚೇತನದ ನೆನಪಿನ ಮುಂದೆ ಅಕ್ಷರದ ಆಶ್ರುತರ್ಪಣ.
 

Post a Comment

0 Comments